
ಕೊರಟಗೆರೆ: ಪಟ್ಟಣದ ಮುಖ್ಯರಸ್ತೆಯ ಬೀದಿ ಬದಿ ವ್ಯಾಪಾರಿಗಳು ತಮ್ಮ ಅಸ್ತಿತ್ವಕ್ಕಾಗಿ ಪ್ರತಿದಿನ ಹೋರಾಟ ನಡೆಸುತ್ತಿದ್ದಾರೆ. ಸೂಕ್ತ ವ್ಯವಸ್ಥೆ, ಭದ್ರತೆ ಇಲ್ಲದೆ ಜೀವನ ದೂಡುತ್ತಿದ್ದಾರೆ.
ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್ ಎದುರಿನ ರಸ್ತೆಯಲ್ಲೇ ನಿತ್ಯ ವ್ಯಾಪಾರ ನಡೆಸುವ ವ್ಯಾಪಾರಿಗಳ ಜೀವಕ್ಕೆ ಭದ್ರತೆಯೇ ಇಲ್ಲದಾಗಿದೆ.
ಸೂಕ್ತ ಸ್ಥಳಾವಕಾಶ ಇಲ್ಲದೇ ರಸ್ತೆಯಲ್ಲೆ ಹೂವು, ಹಣ್ಣು ತರಕಾರಿ ಮಾರುವ ಇಲ್ಲಿನ ವರ್ತಕರಿಗೆ ಯಾವುದೇ ಭದ್ರತೆ ಇಲ್ಲ. ಮುಖ್ಯ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿದರೆ ಯಾವಾಗ ಬೇಕಾದರೂ ಸಾವು– ನೋವು ಸಂಭವಿಸಬಹುದು. ಮುಂಜಾನೆ ಐದು ಗಂಟೆಯಿಂದಲೇ ಈ ಜಾಗದಲ್ಲಿ ಹಳ್ಳಿಗಳಿಂದ ಬರುವ ಹೂವು, ಹಣ್ಣು, ತರಕಾರಿ ವ್ಯಾಪಾರಿಗಳು ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ವ್ಯಾಪಾರ ಮಾಡುವ ಅನಿವಾರ್ಯತೆ ಇದೆ. ಬೀದಿ ಬದಿ ವ್ಯಾಪಾರಿಗಳಿಗೆ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ಸರ್ಕಾರದ ನಿಯಮ ಇದ್ದರೂ ಹಲವು ವರ್ಷಗಳಿಂದ ಅದು ಜಾರಿಯಾಗಿಲ್ಲ.
ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಒದಗಿಸಲು ಅನೇಕ ಬಾರಿ ಪಟ್ಟಣ ಪಂಚಾಯತಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
ಜೀವನ ನಿರ್ವಹಣೆಗೆ ರಸ್ತೆಯಲ್ಲೇ ದಿನ ನಿತ್ಯ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳಿಗೆ ಇಲ್ಲಿನ ಪಟ್ಟಣ ಪಂಚಾಯಿತಿ ಹಲವು ವರ್ಷಗಳಿಂದ ಸೂಕ್ತ ಜಾಗ, ಮೂಲ ಸೌಕರ್ಯ ಕಲ್ಪಿಸಿಲ್ಲ. ಆದರೂ ಅವರಿಂದ ಪ್ರತಿ ದಿನ ಸುಂಕ ವಸೂಲಿಯನ್ನು ಚಾಚೂ ತಪ್ಪದೇ ಮಾಡುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಾರೆ. ತಳ್ಳುವ ಗಾಡಿ ಹಾಗೂ ತರಕಾರಿ, ಹಣ್ಣು, ಹೂವುಗಳನ್ನು ಬುಟ್ಟಿಯಲ್ಲಿ ಹೊತ್ತು ತಿರುಗಿ ಮಾರುವವರಿಂದಲೂ ಸುಂಕ ವಸೂಲಿ ಮಾಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಕನಿಷ್ಠ ಸೌಲಭ್ಯ ನೀಡದಿದ್ದರೂ ಸುಂಕ ಮಾತ್ರ ತಪ್ಪದೇ ವಸೂಲಿ ಮಾಡಲಾಗುತ್ತಿದೆ. ಕೆಲವು ನಗರ, ಪಟ್ಟಣಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಆದರೆ ಪಟ್ಟಣದಲ್ಲಿ ಸುಂಕ ವಸೂಲಿ ನಿಂತಿಲ್ಲ. ಕೊಡಲು ತಡವಾದರೆ ಅಥವಾ ವ್ಯಾಪರ ಇಲ್ಲ ಆಮೇಲೆ ಕೊಡುತ್ತೇವೆ ಎಂದರೆ ಗದರಿಸಿ, ಬೆದರಿಸಿ ಸುಂಕ ವಸೂಲಿ ಮಾಡಲಾಗುತ್ತದೆ ಎಂದು ಇಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.
ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯಲ್ಲೆ ದಿನ ನಿತ್ಯ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.