ADVERTISEMENT

ತುಮಕೂರು: ವಿದ್ಯಾರ್ಥಿಗಳ ‘ಕೈಗಾರಿಕಾ ಅಧ್ಯಯನ ಭೇಟಿ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 7:22 IST
Last Updated 7 ಜೂನ್ 2025, 7:22 IST
ತುಮಕೂರಿನ ಕ್ರೋಮೋಡ್ ಬಯೋಟೆಕ್‌ ಕೈಗಾರಿಕೆಗೆ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರು. ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್‌ ಹಾಲಪ್ಪ ಇತರರು ಹಾಜರಿದ್ದರು
ತುಮಕೂರಿನ ಕ್ರೋಮೋಡ್ ಬಯೋಟೆಕ್‌ ಕೈಗಾರಿಕೆಗೆ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರು. ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್‌ ಹಾಲಪ್ಪ ಇತರರು ಹಾಜರಿದ್ದರು   

ತುಮಕೂರು: ಜಿಲ್ಲೆಯ ಔಷಧ ವಿಜ್ಞಾನ ಮತ್ತು ಅರೆ ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಶುಕ್ರವಾರ ನಗರದ ಕ್ರೋಮೋಡ್ ಬಯೋಟೆಕ್‌ ಕೈಗಾರಿಕೆಗೆ ಭೇಟಿ ನೀಡಿ, ಹಲವು ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.

ಹಾಲಪ್ಪ ಪ್ರತಿಷ್ಠಾನದಿಂದ ‘ಕೈಗಾರಿಕಾ ಅಧ್ಯಯನ ಭೇಟಿ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿದ್ದರು.

‘ಉದ್ಯೋಗ ಪಡೆಯುವ, ಸ್ವಯಂ ಉದ್ಯೋಗದ ಕನಸು ಕಾಣುತ್ತಿರುವ ಯುವ ಜನತೆ ಮತ್ತು ಉದ್ದಿಮೆದಾರರ ಜತೆ ನೇರ ಸಂಪರ್ಕ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿ ಮತ್ತು ಕೈಗಾರಿಕೆ ಮಧ್ಯೆ ಸೇತುವೆಯಾಗಿ ಪ್ರತಿಷ್ಠಾನ ಕೆಲಸ ಮಾಡುತ್ತಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್‌ ಹಾಲಪ್ಪ ಹೇಳಿದರು.

ADVERTISEMENT

ಉದ್ಯೋಗಾಧಾರಿತ ಶಿಕ್ಷಣ ಕಲಿಯುತ್ತಿರುವ ಮಕ್ಕಳು ಕೈಗಾರಿಕೆಗಳಿಗೆ ಭೇಟಿ ನೀಡಬೇಕು. ಉದ್ಯಮ ಎಂದರೆ ಏನು, ಅದರಲ್ಲಿ ಏನೇನು ಅಡಕವಾಗಿದೆ. ಇದರ ಹಿಂದಿನ ಶ್ರಮ, ಯಾವೆಲ್ಲ ಇಲಾಖೆಗಳ ಸಹಕಾರ, ಸಹಯೋಗ ಇದೆ ಎಂಬುದು ತಿಳಿಯುತ್ತದೆ. ಮಾರ್ಗದರ್ಶನ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಮಧು, ‘ಯುವ ಸಮೂಹ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಿದೆ. ಮೊಬೈಲ್‌ ಇದ್ದರೆ ಸಾಕು, ಇನ್ನೇನು ಬೇಡ ಎನ್ನುವ ಮನಃಸ್ಥಿತಿ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೇಶ್, ‘ಉದ್ದಿಮೆ ಪ್ರಾರಂಭಕ್ಕೆ ಅಗತ್ಯ ಭೂಮಿ ಪಡೆಯಲು ಕೆಐಎಡಿಬಿಗೆ ಅರ್ಜಿ ಸಲ್ಲಿಸಬೇಕು. ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶೀಲಿಸಿ ಹಂಚಿಕೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕೈಗಾರಿಕಾ ಹಣಕಾಸು ನಿಗಮದ ಶ್ರೀನಿವಾಸ್, ವಿ.ಪಿ.ಆಗ್ರೊ ಸೈನ್ಸ್‌ನ ಪಾರ್ಥಸಾರಥಿ, ಸಿದ್ಧಗಂಗಾ ಇನ್‍ಕ್ಯುಬೇಷನ್‌ ಸೆಂಟರ್‌ನ ಶ್ರೀಕಾಂತ್‌ ನಾಯರ್, ಕ್ರೋಮೆಡ್‌ ಬಯೋ ಸೈನ್ಸ್‌ ನಿರ್ದೇಶಕರಾದ ರಾಜೇಶ್‌, ಉಮಾಶಂಕರ್‌, ಅಶ್ವಿನಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.