ತುಮಕೂರು: ಲೋಕಸಭೆ ಚುನಾವಣೆಗೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್‍ಲೈನ್ https://suvidha.eci.gov.in ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ 29ರ ಗುಡ್ ಫ್ರೈಡೆ, ಮಾರ್ಚ್ 31ರ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಒಬ್ಬ ಅಭ್ಯರ್ಥಿ ಏ. 4ರ ವರೆಗೆ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯ ಜತೆ ನಾಲ್ವರಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ಸ್ವೀಕರಿಸಬೇಕು. ಪ್ರಮಾಣ ಸ್ವೀಕರಿಸಲು ಹಾಗೂ ಮತದಾರರ ಪಟ್ಟಿಯ ದೃಢೀಕೃತ ನಕಲು ಸಲ್ಲಿಸಲು ಏ. 4ರ ವರೆಗೆ ಕಾಲಾವಕಾಶ ಇರುತ್ತದೆ. ಠೇವಣಿ ಹಣವನ್ನು ಸಾಮಾನ್ಯ ಅಭ್ಯರ್ಥಿಗೆ ₹25 ಸಾವಿರ, ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗೆ ₹12,500 ನಿಗದಿಪಡಿಸಲಾಗಿದೆ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರು ಯಾವುದೇ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು ಸೂಚಕರನ್ನು ಹೊಂದಲು ಅವಕಾಶವಿದೆ. ಈ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು. ನೋಂದಾಯಿತ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳಿಗೆ 10 ಜನ ಸೂಚಕರು ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.