ADVERTISEMENT

ಪರಿಪೂರ್ಣ ಜ್ಞಾನವಿದ್ದರೆ ವೃತ್ತಿಯಲ್ಲಿ ಯಶಸ್ಸು

ವಕೀಲರ ಸಂಘದ ಕಟ್ಡದ 2ನೇ ಅಂತಸ್ತಿನ ಉದ್ಘಾಟನೆ: ವಕೀಲರಿಗೆ ಹೈಕೋರ್ಟ್ ನ್ಯಾಯಾಧೀಶ ಕೆ.ಎಂ.ಫಣೀಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 16:01 IST
Last Updated 24 ಆಗಸ್ಟ್ 2019, 16:01 IST
ವಕೀಲರ ಸಂಘದ 2ನೇ ಅಂತಸ್ತಿನ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶರಾದ ಅಲೋಕ್ ಅರಾದೆ ಉದ್ಘಾಟಿಸಿದರು. ಕೆ.ಎನ್.ಫಣೀಂದ್ರ, ರಾಜೇಂದ್ರ ಬಾದಾಮಿಕರ್, ಜೆ.ಕೆ.ಅನಿಲ್, ಆರ್.ಪಾತಣ್ಣ, ಡಿ.ಎ.ಜಗದೀಶ್, ಡಾ.ಶೋಭಾರಾಣಿ ಇದ್ದರು.
ವಕೀಲರ ಸಂಘದ 2ನೇ ಅಂತಸ್ತಿನ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶರಾದ ಅಲೋಕ್ ಅರಾದೆ ಉದ್ಘಾಟಿಸಿದರು. ಕೆ.ಎನ್.ಫಣೀಂದ್ರ, ರಾಜೇಂದ್ರ ಬಾದಾಮಿಕರ್, ಜೆ.ಕೆ.ಅನಿಲ್, ಆರ್.ಪಾತಣ್ಣ, ಡಿ.ಎ.ಜಗದೀಶ್, ಡಾ.ಶೋಭಾರಾಣಿ ಇದ್ದರು.   

ತುಮಕೂರು: 'ವಕೀಲರು ಸಾರ್ವಜನಿಕರು ಮತ್ತು ನ್ಯಾಯಾಂಗದ ಸೇತುವೆಯಾಗಿದ್ದಾರೆ. ನ್ಯಾಯಾಂಗದ ಪ್ರಕ್ರಿಯೆಗಳ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿರಬೇಕು. ಪ್ರಕರಣಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ವಾದ ಮಂಡಿಸಿದರೆ ನ್ಯಾಯಾಧೀಶರು ತ್ವರಿತವಾಗಿ ಪ್ರಕರಣ ಕುರಿತು ಆದೇಶ ಮಾಡಲು ಸಹಕಾರಿಯಾಗುತ್ತದೆ' ಎಂದು ಹೈಕೋರ್ಟ್ ನ್ಯಾಯಾಧೀಶ ಕೆ.ಎನ್.ಫಣೀಂದ್ರ ಹೇಳಿದರು.

ಶನಿವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ತುಮಕೂರು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ಧ ಜಿಲ್ಲಾ ವಕೀಲರ ಸಂಘದ ಕಟ್ಟಡದ 2ನೇ ಅಂತಸ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ, ರಕ್ಷಣೆಗೆ ಪೊಲೀಸರ ಬಳಿ, ನ್ಯಾಯಕ್ಕಾಗಿ ನ್ಯಾಯಾಲಯ, ವಕೀಲರ ಬಳಿ ಸಾರ್ವಜನಿಕರು ಹೆಚ್ಚು ಬರುತ್ತಾರೆ. ತ್ವರಿತ ನ್ಯಾಯದ ನಿರೀಕ್ಷೆಯ ಸಾಕಾರಕ್ಕೆ ವಕೀಲರ ಶ್ರಮ ಅವಶ್ಯಕವಾಗಿದೆ. ಈಚೆಗೆ ವಕೀಲರಲ್ಲಿ ಅಧ್ಯಯನ ಶೀಲತೆ ಕಡಿಮೆ ಆಗಿದೆ. ವಿಶೇಷವಾಗಿ ಯುವ ವಕೀಲರಲ್ಲಿ ಈ ಕೊರತೆ ಹೆಚ್ಚು ಎದ್ದು ಕಾಣುತ್ತದೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.

ADVERTISEMENT

ಈಗಲೂ ಶೇ 80 ರಷ್ಟು ಪ್ರಕರಣಗಳು ಕೋರ್ಟ್ ಆಚೆಯೇ ನಾನಾ ಕಾರಣಗಳಿಂದ ನ್ಯಾಯಾಂಗೇತರ ವ್ಯವಸ್ಥೆಯ ಸುಳಿಯಲ್ಲಿರುತ್ತವೆ. ತ್ವರಿತವಾಗಿ ಪ್ರಕರಣ ಇತ್ಯರ್ಥವಾಗುವ ವಿಶ್ವಾಸ ಸಾರ್ವಜನಿಕರಲ್ಲಿ ಮೂಡಿದರೆ ಆ ಶೇ 80ರಷ್ಟು ಪ್ರಕರಣಗಳು ಕೋರ್ಟ್ ಅಂಗಳಕ್ಕೆ ಬರುತ್ತವೆ. ಅದರ ಪ್ರತಿಫಲ ವಕೀಲರಿಗೆ ಸಲ್ಲುತ್ತದೆ ಎಂದು ಹೇಳಿದರು.

ನೂತನ ಕಟ್ಟಡ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಜಿಲ್ಲಾ ಆಡಳಿತ ನ್ಯಾಯಾಧೀಶರಾದ ಅಲೋಕ್ ಅರಾದೆ ಮಾತನಾಡಿ, ‘ಬಡ ಕಕ್ಷಿದಾರರ ಹಿತದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ಮೂಲಸೌಕರ್ಯಗಳನ್ನು ನ್ಯಾಯಾಂಗ, ವಕೀಲರಿಗೆ ದೊರಕಿಸುತ್ತಿದೆ. ಅವುಗಳ ಪ್ರಯೋಜನವನ್ನು ವಕೀಲರು ಪಡೆದುಕೊಳ್ಳಬೇಕು. ತ್ವರಿತ ನ್ಯಾಯದಾನಕ್ಕೆ ವಕೀಲರು ನ್ಯಾಯಾಧೀಶರೊಂದಿಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮಾತನಾಡಿದರು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಅಧ್ಯಕ್ಷತೆವಹಿಸಿದ್ದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ದೇವರಾಜು ನಿರೂಪಿಸಿದರು. ಖಜಾಂಚಿ ಆರ್.ಪಾತಣ್ಣ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಎ.ಜಗದೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.