ADVERTISEMENT

ವಿಜೃಂಭಿಸಿದ ‘ಪಾವಿತ್ರ್ಯ’: ಹನೂರು

ಸಾಹಿತಿ ನಟರಾಜ ಬೂದಾಳು ಅವರ ಕೃತಿಗಳ ಕುರಿತು ಮಾತುಕತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 7:45 IST
Last Updated 15 ಫೆಬ್ರುವರಿ 2021, 7:45 IST
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಕಲ್ಗುಡಿ ಮಾತನಾಡಿದರು. ಡಾ.ಬಸವರಾಜ್, ಕೇಶವ ಮಳಗಿ, ಕೃಷ್ಣಮೂರ್ತಿ ಹನೂರು, ನಟರಾಜ ಬೂದಾಳು, ರಹಮತ್ ತರೀಕೆರೆ ಇದ್ದಾರೆ
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಕಲ್ಗುಡಿ ಮಾತನಾಡಿದರು. ಡಾ.ಬಸವರಾಜ್, ಕೇಶವ ಮಳಗಿ, ಕೃಷ್ಣಮೂರ್ತಿ ಹನೂರು, ನಟರಾಜ ಬೂದಾಳು, ರಹಮತ್ ತರೀಕೆರೆ ಇದ್ದಾರೆ   

ತುಮಕೂರು: ಸಮಾಜದಲ್ಲಿಪಾವಿತ್ರ್ಯ ವಿಚಾರ ವಿಜೃಂಭಿಸುತ್ತಿದೆ. ಧರ್ಮವೇ ಎದ್ದೆದ್ದು ಕುಣಿಯುತ್ತಿದೆ ಎಂದು ಸಾಹಿತಿ ಕೃಷ್ಣಮೂರ್ತಿ ಹನೂರು ಆತಂಕ ವ್ಯಕ್ತಪಡಿಸಿದರು.

ಬೋಧಿಮಂಡಲ, ಪಲ್ಲವ ಪ್ರಕಾಶನ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ನಟರಾಜ ಬೂದಾಳು ಅವರ ಬೌದ್ಧ ತಾತ್ವಿಕತೆ, ಕನ್ನಡ ಕಾವ್ಯ ಮೀಮಾಂಸೆ, ಸಂಸ್ಕೃತಿ ಚಿಂತನೆ, ದೇಸಿ ಅನುಭಾವಿ ಧಾರೆಗಳು ಮತ್ತು ತತ್ವ ಪದಗಳ ಕೃತಿಗಳ ಕುರಿತು ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನಪದ ಕಲಾವಿದರು ರಾಮನ ಮೇಲೆ ತತ್ವ ಪದಗಳನ್ನು ರಚಿಸಿ ಹಾಡಿಲ್ಲ. ಆಂಜನೇಯನ ಮೇಲೆ ಹಾಡಿ
ದ್ದಾರೆ. ರಾಮನಂತಹ ಮಗ ಬೇಡ, ಆಂಜನೇಯನಂತಹ ಮಗ ಬೇಕು ಎನ್ನುತ್ತಾರೆ. ಆಂಜನೇಯ ಬ್ರಹ್ಮಚಾರಿ ಎಂದರೆ, ನಾವೇ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ತತ್ವಪದಕಾರರಿಗೆಆಂಜನೇಯ ಆದರ್ಶವಾಗಿ ಕಾಣುತ್ತಾನೆ. ಹಾಗಾಗಿ ಜಾನಪದ ಚರಿತ್ರೆ ಗೊತ್ತಾಗದೆ ಶಿಷ್ಟ ಚರಿತ್ರೆ ಬರೆಯಲಾಗದು’ ಎಂದು ನುಡಿದರು.

ADVERTISEMENT

ಕುವೆಂಪು ಅವರ ವೈಚಾರಿಕತೆಯ ಮುಂದಿನ ಭಾಗವಾಗಿ ನಟರಾಜ ಬೂದಾಳು ಮುಂದುವರಿದಿದ್ದಾರೆ. ಕುವೆಂಪು ಅವರಿಗೆ ಹೋಲಿಸುತ್ತಿಲ್ಲ. ಆದರೆ ಆ ನಿಟ್ಟಿನಲ್ಲಿ ಸಾಗಿದ್ದಾರೆ ಎಂದು ಬಣ್ಣಿಸಿದರು.

ವಿಮರ್ಶಕಬಸವರಾಜ ಕಲ್ಗುಡಿ, ‘ಬೌದ್ಧರ ವಿಚಾರಗಳ ಅನುಸರಣೆ ಸಮಯದಲ್ಲಿ ಕೆಲವರು ಅಮಾನವೀಯ ಗುಣಗಳನ್ನು ತೋರಿಸಿಕೊಟ್ಟಿದ್ದಾರೆ. ಸಂಪ್ರದಾಯಸ್ಥ ಬೌದ್ಧರು ಕೆಲ ಅಪಾಯಗಳನ್ನು ಸೃಷ್ಟಿಸಿದ್ದಾರೆ. ಬೌದ್ಧರ ತಪ್ಪುಗಳನ್ನು ಅರಿಯದಿದ್ದರೆ ಬೌದ್ಧ ತತ್ವಗಳನ್ನು ತಿರಸ್ಕರಿಸುವ ಅಪಾಯವಿದೆ’ ಎಂದು ಎಚ್ಚರಿಸಿದರು.

ಪರಿಸರ ನಾಶ ತಡೆದು ಜೀವ ಜಗತ್ತು ಪೋಷಿಸಿದರೆ ಬದುಕಬಲ್ಲೆವು ಎಂಬ ಸತ್ಯವನ್ನು ಮರೆತು ನಾಶ ಮಾಡುತ್ತಿದ್ದೇವೆ. ಅದೇ ರೀತಿ ಎಲ್ಲ ಧರ್ಮಗಳಲ್ಲಿ ಇರುವ ಒಳಿತನ್ನು ಪಡೆದುಕೊಳ್ಳಬೇಕು. ಬೌದ್ಧರ ವಿಚಾರಗಳನ್ನೂ ಅದೇ ಮಾರ್ಗದಲ್ಲಿ ನೋಡಿದರೆ ಅದರಿಂದಾಗುವ ಅಪಾಯ ತಪ್ಪಿಸಬಹುದು ಎಂದರು.

ಲೇಖಕ ರಹಮತ್ ತರೀಕೆರೆ, ‘ಬುದ್ಧಿಸಮ್‌ನಿಂದ ಇತಿಹಾಸದಲ್ಲಿ ಆಗಿರುವ ಅನಾಹುತಗಳನ್ನು ಗಮನಿಸ
ಬೇಕು. ಇತರ ಸಂದರ್ಭಗಳಲ್ಲೂ ಹಿಂಸೆಗಳು ನಡೆದಿವೆ.ಕಮ್ಯುನಿಷ್ಟ್ ಸಿದ್ಧಾಂತದಲ್ಲೂ ಅದು ಆಗಿದೆ. ಹಿಂಸೆ ರಹಿತ ಸಮಾಜ ರೂಪಿಸಲು ಬೌದ್ಧರ ಬೇರೆಬೇರೆ ದಾರಿಗಳನ್ನು ಗುರುತಿಸಿ ಮೌಲ್ಯಮಾಪನ ಮಾಡಬೇಕು. ಬುದ್ಧನ ಚಿಂತನೆಗಳೂ ಏಕರೂಪಿಯಾಗಿಲ್ಲ. ಪರ್ಯಾಯ ಸಂಸ್ಕೃತಿಯ ಹುಡುಕಾಟವನ್ನು ಒಂದು ತಂಡವಾಗಿ ಮಾಡಬೇಕು’ ಎಂದು ಸಲಹೆ ಮಾಡಿದರು.

ಅಂಬೇಡ್ಕರ್ ಸ್ಥಾಪಿಸಿದ ಪಕ್ಷ ಈಗ ಮಹಾರಾಷ್ಟ್ರದಲ್ಲಿ ಮತೀಯವಾದಿಗಳ ಜತೆಗೆ ಸೇರಿಕೊಂಡಿದೆ. ದಲಿತರಿಗೆ ಧರ್ಮದ ಬದುಕು ಮುಖ್ಯವಾಗುತ್ತಿಲ್ಲ. ಸುಡುವ ಬದುಕಿನಿಂದ ಹೊರ ಬರುವ ಜೀವನ ಬೇಕಾಗಿದೆ ಎಂದು ಅವರು ಹೇಳಿದರು.

ಲೇಖಕ ಜಿ.ವಿ.ಆನಂದಮೂರ್ತಿ, ‘ಬೌದ್ಧರ ತಾತ್ವಿಕ ಚಿಂತನೆಗಳನ್ನು ವರ್ತಮಾನಗೊಳಿಸಬೇಕು. ಆ ಕೆಲಸ
ವನ್ನು ಕನ್ನಡದ ಕೆಲವು ಲೇಖಕರು ಮಾಡಿದ್ದಾರೆ. ಅಂತಹ ಕಾರ್ಯದಲ್ಲಿ ನಟರಾಜ ಬೂದಾಳು ಸಹ ತೊಡಗಿಸಿ
ಕೊಂಡಿದ್ದಾರೆ. ಪರ್ಯಾಯ ಮಾರ್ಗಗಳ ಸತ್ಯಾನ್ವೇಷಣೆಯಲ್ಲಿ ಇದ್ದಾರೆ. ರೋಗಗ್ರಸ್ಥ
ವಾಗಿರುವ ಸಮಾಜಕ್ಕೆ ಕೃತಿಗಳ ಮೂಲಕ ಚಿಕಿತ್ಸೆ ನೀಡಿದ್ದಾರೆ’ ಎಂದು ಸ್ಮರಿಸಿದರು.

ಕಥೆಗಾರ ಕೇಶವ ಮಳಗಿ, ನಟರಾಜ ಬೂದಾಳು ಮಾತನಾಡಿದರು. ಪಲ್ಲವ ವೆಂಕಟೇಶ್, ಡಾ.ಬಸವರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.