ADVERTISEMENT

ಹುಣಸೆ ಸುಗ್ಗಿ; ಉದ್ಯೋಗ ಸೃಷ್ಟಿ

ಬಯಲು ಸೀಮೆಯಲ್ಲಿ ಕಲ್ಪವೃಕ್ಷದಂತೆ ಬಳಕೆ: ಆರು ತಿಂಗಳು ಕೈತುಂಬ ಕೆಲಸ

ನಾಗರಾಜಪ್ಪ
Published 28 ಮಾರ್ಚ್ 2024, 6:42 IST
Last Updated 28 ಮಾರ್ಚ್ 2024, 6:42 IST
ಹುಣಸೆ ತೋಪು
ಹುಣಸೆ ತೋಪು   

ವೈ.ಎನ್.ಹೊಸಕೋಟೆ: ಬಯಲುಸೀಮೆಯ ಬಹುತೇಕ ಗ್ರಾಮೀಣ ಜನರಿಗೆ ಈ ಬಾರಿಯ ಹುಣಸೆ ಫಸಲು ಉದ್ಯೋಗ ಒದಗಿಸಿ ಆರ್ಥಿಕ ಶಕ್ತಿ ತುಂಬುತ್ತಿದೆ.

ಶೇಂಗಾ ಸುಗ್ಗಿಯ ಕೆಲಸ ಮುಗಿದು, ಉದ್ಯೋಗವಿಲ್ಲದೆ ಖಾಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಹುಣಸೆ ಫಸಲು ಕೂಲಿ ಕಾರ್ಮಿಕರನ್ನು ಕೈ ಹಿಡಿಯುತ್ತಾ ಉದ್ಯೋಗ ಒದಗಿಸುತ್ತಿದೆ.

ಜನವರಿಯಿಂದ ಪ್ರಾರಂಭವಾಗಿ ಏಪ್ರಿಲ್‌ವರೆಗೆ 3ರಿಂದ 4 ತಿಂಗಳು ಫಸಲು ಕೀಳುವ, ಆಯುವ, ಸಾಗಿಸುವ ಶ್ರಮಿಕರಿಗೆ ಮೈತುಂಬಾ ಕೆಲಸ ನೀಡುತ್ತಿದೆ.

ADVERTISEMENT

ಬಯಲು ಸೀಮೆಯಲ್ಲಿ ಕಲ್ಪವೃಕ್ಷದಂತೆ ಬಳಕೆಯಲ್ಲಿರುವ ಹುಣಸೆ ಮರವು ಯೂರೋಪಿಯನ್ನರ ಆಗಮನದೊಂದಿಗೆ ಭಾರತವನ್ನು ಪ್ರವೇಶಿಸಿತ್ತು. ಬಯಲುಸೀಮೆಗೂ ಹರಡಿ ಪ್ರತಿ ಗ್ರಾಮದ ರಸ್ತೆ ಇಕ್ಕೆಲಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ, ಗುಂಡುತೋಪುಗಳೋಪಾದಿಯಲ್ಲಿ ಕಂಡುಬರುತ್ತದೆ.

ಹುಣಸೆ ಮರದ ಫಸಲಿನ ಪ್ರತಿ ಭಾಗವೂ ಉಪಯುಕ್ತವಾಗಿದ್ದು, ಹಣವನ್ನು ಗಳಿಸಿಕೊಡುತ್ತದೆ. ಗೊಳ್ಳೆ ಎಂದು ಕರೆಸಿಕೊಳ್ಳುವ ಕಾಯಿಯ ತೊಗಟೆ ಉತ್ತಮ ಉರುವಲು. ಮನೆ ಬಳಕೆಗೆ ಮತ್ತು ಇಟ್ಟಿಗೆ ಸುಡುವ ಕಾರ್ಖಾನೆಗಳಿಗೆ ವ್ಯಾಪಾರವಾಗುತ್ತಿದೆ. ಹಣ್ಣಿನ ನಾರು ಉರುವಲು ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹಣ್ಣು ಮುಖ್ಯ ವಸ್ತುವಾಗಿ ಹಣ ಗಳಿಕೆಯ ಪ್ರಮುಖ ಮೂಲವಾದರೆ, ಅದರಿಂದ ಹೊರಡುವ ಬೀಜವು ಗೋಂದಿಗಾಗಿ, ಎಣ್ಣೆಯಾಗಿ ಮತ್ತು ಕಾಫಿಯ ಮಿಶ್ರಣಕ್ಕಾಗಿ ಬಳಕೆಯಾಗುತ್ತಾ ಒಂದಷ್ಟು ಆದಾಯಯವನ್ನು ತಂದು ಕೊಡುತ್ತದೆ.

ಹುಣಸೆ ಫಸಲು ಈ ಪ್ರದೇಶದಲ್ಲಿ ಹುಣಸೆ ಸುಗ್ಗಿಯನ್ನು ಸೃಷ್ಟಿಸಿದ್ದು, ಕೆಲವು ತಿಂಗಳು ಕಾರ್ಮಿಕರ ಕೈ ಹಿಡಿಯುತ್ತದೆ. ಹುಣಸೆ ಕಾಯಿ ಸಿಪ್ಪೆ ತೆಗೆಯುವ, ಹಣ್ಣು ಕುಟ್ಟಿ ಬೀಜ ತೆಗೆಯುವ, ಗುಣಮಟ್ಟದ ಹಣ್ಣು ಬೇರ್ಪಡಿಸಿ ಕರ್ಪುಡಿ ಒತ್ತುವ, ಹುಣಸೆ ಹಣ್ಣಿನ ಚಕ್ಕ ತುಳಿಯುವ, ದೂರದ ಮಾರುಕಟ್ಟೆಗೆ ಸಾಗಿಸುವಂತಹ ಕೆಲಸ ಸುಮಾರು ಆರು ತಿಂಗಳು ನಡೆಯುತ್ತಿರುತ್ತದೆ.

ಬಯಲುಸೀಮೆಯ ಶ್ರಮಿಕರಿಗೆ, ರೈತರಿಗೆ, ಕೂಲಿಯಾಳು, ವ್ಯಾಪಾರಿಗಳಿಗೆ, ಸಾರಿಗೆ ವಾಹನದಾರರಿಗೆ ವರ್ಷದ ಆರು ತಿಂಗಳು ಆರ್ಥಿಕ ಚೇತರಿಕೆಯನ್ನು ನೀಡುವ ಫಸಲಾಗಿದೆ.

2-3 ತಿಂಗಳು ಹುಣಸೆ ಕಾಯಿ ಕೀಳುವ ಕೂಲಿ ಸಿಗುತ್ತಿದೆ. ₹500ರಿಂದ ₹700ರವರೆಗೆ ಕೂಲಿ ದೊರೆಯುತ್ತಿದೆ. ಆದರೆ ಮರ ಹತ್ತಿ ಹುಣಸೆ ಕಾಯಿ ಕೀಳುವ ಸಂದರ್ಭದಲ್ಲಿ ಸ್ಪಲ್ಪ ಆಯ ತಪ್ಪಿದರೂ ಅವಘಡ ನಿಶ್ಚಿತ. ಜೀವಕ್ಕೆ ಯಾವುದೇ ಭದ್ರತೆ ಇಲ್ಲ.
ಪಾಲಯ್ಯ ಕೂಲಿ ಕಾರ್ಮಿಕ
ಹುಣಸೆ ಫಸಲಿನ ವ್ಯಾಪಾರ ಪೈಪೋಟಿ ಹೆಚ್ಚಾಗಿದೆ. ಹೂವು ಮೂಡುವ ಮೊದಲೇ ಹುಣಸೆ ತೋಪುಗಳ ವ್ಯಾಪಾರ ಮಾಡುವುದು ವಾಡಿಕೆ. ಕೆಲವೊಮ್ಮ ಲಾಭ ಬಂದರೆ ಹಲವು ಬಾರಿ ನಷ್ಟವಾಗುತ್ತದೆ. ಆದಾಗ್ಯೂ ವರ್ಷದ ಒಂದಷ್ಟು ತಿಂಗಳು ಕೆಲಸ ನೀಡುತ್ತದೆ.
ವೆಂಕಟೇಶ ಹುಣಸೆ ಹಣ್ಣು ವ್ಯಾಪಾರಿ ಮಾರಮ್ಮನಹಳ್ಳಿ
ಹಲವು ವರ್ಷಗಳಿಂದ ಹುಣಸೆ ವ್ಯಾಪಾರ ಮಾಡುತ್ತಿದ್ದೇವೆ. ಇತ್ತೀಚೆಗೆ ಮರ ಹತ್ತಿ ಕಾಯಿ ಕೀಳುವವರ ಕೊರತೆಯಿಂದ ಕೂಲಿಯ ದರ ಹೆಚ್ಚಾಗಿದೆ. ಲಾಭದ ನಿರೀಕ್ಷೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯ ಏರುಪೇರಿ ಕಾಡುತ್ತಿದೆ.
ನಾಗರಾಜು ಹುಣಸೆ ವ್ಯಾಪಾರಿ ದಳವಾಯಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.