ADVERTISEMENT

ಪರಿಹಾರ ಧನ ಪಡೆಯಲು ಹತ್ತಾರು ವಿಘ್ನ

ಶ್ರಮಿಕ ಪ್ಯಾಕೇಜ್‌; 31 ಸಾವಿರ ಜನರಿಗೆ ನೆರವು; ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:10 IST
Last Updated 26 ಮೇ 2020, 2:10 IST
ರಂಗಪ್ಪ
ರಂಗಪ್ಪ   

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಶ್ರಮಿಕರಿಗೆ ರಾಜ್ಯ ಸರ್ಕಾರವು ಪ್ಯಾಕೇಜ್ ಘೋಷಿಸಿದೆ. ಇದರ ಲಾಭ ಜಿಲ್ಲೆಯಲ್ಲಿ ಸುಮಾರು 31 ಸಾವಿರ ಶ್ರಮಿಕರಿಗೆ ತಲುಪುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ನೋಂದಾಯಿತ 55,341 ಕಟ್ಟಡ ಕಾರ್ಮಿಕರು ಇದ್ದಾರೆ. ಇವರಲ್ಲಿ 21,400 ಜನರ ಮಾಹಿತಿಯನ್ನು ಜಿಲ್ಲಾ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಳುಹಿಸಿಕೊಟ್ಟಿದೆ. ಆರು ಸಾವಿರ ಆಟೊ ಚಾಲಕರು ಹಾಗೂ ನಾಲ್ಕು ಸಾವಿರ ಟ್ಯಾಕ್ಸಿ ಚಾಲಕರು ಇದ್ದಾರೆ. ಪಟ್ಟಿಯಲ್ಲಿರುವ ಎಲ್ಲರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರ ಧನ ಜಮೆಯಾಗಲಿದೆ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್‌ ಎಂ.ಆಲದಕಟ್ಟಿ.

ಪ್ರಾದೇಶಿಕ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ಸುಮಾರು 6 ಸಾವಿರ ಆಟೊ ಚಾಲಕರು ಹಾಗೂ 3ರಿಂದ 4 ಸಾವಿರ ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗಲಿದೆ ಎಂದು ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್‌.ರಾಜು ಮಾಹಿತಿ ನೀಡಿದರು.

ADVERTISEMENT

ಆಟೊ, ಟ್ಯಾಕ್ಸಿ ಚಾಲಕರಿಗೆ ನೆರವು ನೀಡುವುದಾಗಿ ಸರ್ಕಾರ ಘೋಷಿಸಿ, ಆನ್‌ಲೈನ್‍ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರೂ ಸರ್ವರ್ ಸಮಸ್ಯೆಯಿಂದ ಅರ್ಜಿಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕ ವೃತ್ತಿ ಅವಲಂಬಿಸಿರುವ ಹಲವರು ದೂರುತ್ತಾರೆ.

ಕಳೆದ ಎರಡು ತಿಂಗಳಿನಿಂದ ಅಟೊ ಓಡಿಸಿಲ್ಲ. ದುಡಿಮೆ ಇದ್ದರೆ ನಾಲ್ಕು ಕಾಸು ಸಂಪಾದನೆಯಾಗುತ್ತದೆ. ಸರ್ಕಾರ ಘೋಷಿಸಿದ ನೆರವು ನಮ್ಮ ಕೈಗೆ ಬಂದರೆ ನಮಗೂ ಅನುಕೂಲವಾಗುತ್ತದೆ. ಆದರೆ ನಮ್ಮ ದಾಖಲೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೂ ಅಪ್ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನದು ಹಳೆಯ ಡಿಎಲ್‌. ಅದರಲ್ಲಿ ರಂಗಪ್ಪ.ಆರ್‌. ಎಂದಿದೆ. ಆಧಾರ್‌ನಲ್ಲಿ ರಂಗಪ್ಪ ಎಂದು ಮಾತ್ರ ಇದೆ. ಆದ್ದರಿಂದ ಲಿಂಕ್‌ ತೆಗೆದುಕೊಳ್ಳುತ್ತಿಲ್ಲ. ಬೇರೆಲ್ಲ ಮಾಹಿತಿಗಳು ಸರಿಯಾಗಿಯೇ ಇವೆ. ನಮಗೆ ಯಾವುದಾದರೊಂದು ರೀತಿಯಲ್ಲಿ ತೊಂದರೆಯಂತೂ ಇದ್ದೇ ಇದೆ ಎನ್ನುತ್ತಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಾಹಿತಿ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಅದಕ್ಕಿಂತ ಮೊದಲು ಗುರುತಿನ ಚೀಟಿ ಮಾಡಿದವರು ಇಲಾಖೆಗೆ ಮಾಹಿತಿ ನೀಡಬೇಕಿದೆ.

‘ನಾನು 5 ವರ್ಷಗಳಿಂದ ಆಟೊ ಓಡಿಸುತ್ತಿದ್ದೇನೆ. ಲಾಕ್‌ಡೌನ್‌ನಿಂದ ಆಟೊ ಓಡಿಸಲು ಸಾಧ್ಯವಾಗಿಲ್ಲ. ಸರ್ಕಾರದ ಪರಿಹಾರಧನ ಪಡೆಯಲು ಅರ್ಜಿ ಹಾಕಲೂ ಸಾಧ್ಯವಾಗುತ್ತಿಲ್ಲ. ಸೇವಾಸಿಂಧು ಶನಿವಾರದಿಂದ ಕಾರ್ಯಾರಂಭ ಮಾಡಿದ್ದರೂ ಕೆಲವು ಹಂತದ ಮಾಹಿತಿಗಳನ್ನು ಮಾತ್ರ ಸ್ವೀಕರಿಸಿ, ಸ್ಥಗಿತಗೊಳ್ಳುತ್ತಿದೆ. ದಿನವೆಲ್ಲ ಪ್ರಯತ್ನಿಸಿದರೂ ಒಬ್ಬರ ಅರ್ಜಿಯನ್ನೂ ಪೂರ್ಣಗೊಳಿಸಲಾಗುತ್ತಿಲ್ಲ. ಚಾಲಕನ ಹೆಸರು, ವಿಳಾಸ, ಆಧಾರ್ ಸಂಖ್ಯೆ ಭರ್ತಿ ಆದ ಬಳಿಕ ಆಧಾರ್ ನೋಂದಾಯಿತ ಮೊಬೈಲ್‍ಗೆ ಒಟಿಪಿ ಬರುತ್ತಿದೆ. ಚಾಲಕನ ಪರವಾನಗಿ ವಿವರ ಭರ್ತಿ ಮಾಡಿದರೆ ಅನುಜ್ಞಾಪತ್ರದ ವಿವರ ಸ್ವಯಂ ದಾಖಲಾಗುತ್ತವೆ. ಬಳಿಕ ವಾಹನದ ಮಾಹಿತಿ, ಅದರ ನೋಂದಾಯಿತ ಪತ್ರದ ಮಾಹಿತಿ ಭರ್ತಿ ಮಾಡಬೇಕು. ಆದರೆ ಈ ಪ್ರಕ್ರಿಯೆ ಬಳಿಕ ಅರ್ಜಿ ಪೂರ್ಣಗೊಳಿಸುವಿಕೆ ಸ್ಥಗಿತವಾಗುತ್ತಿದೆ. ನಂತರದ ಯಾವ ಮಾಹಿತಿಗಳನ್ನೂ ಅಪ್ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆಟೊ ಚಾಲಕ ಸಿ.ಪಾಪಯ್ಯ ನೋವು ತೋಡಿಕೊಂಡರು.

ದಿನಗೂಲಿ ನೌಕರರು, ಆಟೊ ರಿಕ್ಷಾ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು ಸರ್ಕಾರದ ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ, ಪರಿಹಾರಕ್ಕಾಗಿ https://sevasindhu.karnataka.gov.in ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ನಿಯಮಾವಳಿ ಸರಳಗೊಳಿಸಿ

ಸರ್ಕಾರದ ಪರಿಹಾರ ಧನ ಚಾಲಕರಿಗೆ ಸಿಗುತ್ತಿಲ್ಲ. ಬಹಳಷ್ಟು ಜನರು ಸಾಂಪ್ರದಾಯಿಕವಾಗಿ ಆಟೊ ಚಾಲನೆ ಮಾಡುತ್ತಿದ್ದಾರೆ. ಶ್ರಮಿಕ ಪ್ಯಾಕೇಜ್‌ನಲ್ಲಿ ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಲಿಂಕ್‌ ಆಗಿದ್ದರೆ ಮಾತ್ರವೇ ಪರಿಹಾರ ಪಡೆಯಲು ಸಾಧ್ಯವಿದೆ. ಜಿಲ್ಲೆಯಲ್ಲಿ ಶೇ 60 ಮಂದಿ ಆಟೊ ಚಾಲಕರಿಗೆ ಸ್ವಂತ ಆಟೊ ಇಲ್ಲ. ಚಾಸಿಸ್‌ ನಂಬರ್‌ ಬೇರೆಯವರ ಹೆಸರಿನಲ್ಲಿದೆ. ಹಾಗಾಗಿ ಡಿಎಲ್‌, ಬ್ಯಾಂಕ್‌ ಅಕೌಂಟ್‌, ಆಧಾರ್‌ ಇದ್ದರೆ ಅವರಿಗೆ ಪರಿಹಾರ ಹಣವನ್ನು ಪಾವತಿ ಮಾಡಬೇಕು. ಇಲ್ಲದಿದ್ದರೆ ಆಟೊ ಚಾಲಕರಿಗೆ ಅನ್ಯಾಯವಾಗಲಿದೆ ಎನ್ನುತ್ತಾರೆ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್‌ ಮುಜೀಬ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.