ಗುಬ್ಬಿ: ಶಾಲೆಯಲ್ಲಿ ಶಿಕ್ಷಣದ ಜೊತೆ ನಗುವಿನ ವಾತಾವರಣ ನಿರ್ಮಾಣ ಮಾಡಿದಾಗ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವುದು ಎಂದು ಮನೋವಿಜ್ಞಾನಿ ಸಿ.ಎಚ್ ಚಂದ್ರಶೇಖರ್ ತಿಳಿಸಿದರು.
ಚೇಳೂರಿನಲ್ಲಿ ಶುಕ್ರವಾರ ನಡೆದ ‘ವೀನಸ್ ಮನೋರಮಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯು ಶಿಕ್ಷಣದ ಪರಿಕಲ್ಪನೆಯಲ್ಲಿ ಕಲಿಕೆಯ ಜೊತೆ ಜೊತೆಯಲ್ಲೇ ಮಕ್ಕಳ ನಗುವನ್ನು ಅರಳಿಸುವ ಪ್ರಯತ್ನ ಮಾಡಬೇಕಿದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೆ ಸ್ವಚ್ಛ ವಾತಾವರಣದಲ್ಲಿ ಓದುವುದನ್ನು ರೂಡಿಸಬೇಕಿದೆ. ಭಯಮುಕ್ತ ವಾತಾವರಣವಿದ್ದಲ್ಲಿ ಮಕ್ಕಳ ಮನೋವಿಕಾಸ ಹೆಚ್ಚಾಗಿ ಜ್ಞಾನ ಅಭಿವೃದ್ಧಿಗೆ ಪೂರಕವಾಗುವುದು ಎಂದು ತಿಳಿಸಿದರು.
ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತಹ ಪ್ರೀತಿಯ ವಾತಾವರಣವನ್ನು ಕಲ್ಪಿಸಿಕೊಡಬೇಕು. ಪ್ರೀತಿಯಿಂದ ಪ್ರೇರೇಪಣೆ ಹೊಂದಿದ ಮಕ್ಕಳು ಮಹತ್ತರವಾದದ್ದನ್ನು ಸಾಧಿಸಲು ಮುಂದಾಗುವರು ಎಂದು ಹೇಳಿದರು.
ಶಾಲೆ ಕಾರ್ಯದರ್ಶಿ ಮಾತನಾಡಿ, ಶಿಕ್ಷಣದ ಕಲ್ಪನೆಗಳು 20 ವರ್ಷಗಳ ಹಿಂದೆ ಕೇವಲ ಪುಸ್ತಕಕ್ಕೆ ಸೀಮಿತವಾಗಿತ್ತು. ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ವಾತಾವರಣ ಬದಲಾಗುತ್ತಿದ್ದು ಮಗುವಿನ ಕಲಿಕೆಯ ಜೊತೆ ಸಾಂಸ್ಕೃತಿಕ ಮತ್ತು ಕ್ರೀಡೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲು ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಂಸ್ಥೆ ಗೌರವಾಧ್ಯಕ್ಷ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ರಮೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ನಾಗರಾಜು, ವಿಜಯ್ ಕುಮಾರ್, ಶಿವಕುಮಾರ್, ವಿಜಯಲಕ್ಷ್ಮಿ, ಶಾರದಮ್ಮ, ಸಿಆರ್‌ಪಿ ರುದ್ರೇಶ್, ಸುಜಾತಾ, ಮನೋಜ್ ಕುಮಾರ್, ಶಶಿಕುಮಾರ್, ಚಿಕ್ಕೇಗೌಡ, ಕಾರ್ಯದರ್ಶಿ ನಟರಾಜು, ಗಿರೀಶ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.