ADVERTISEMENT

ಪೌರಾಯುಕ್ತ ಗಣವೇಷ: ಕಾಂಗ್ರೆಸ್‌ ಆಕ್ರೋಶ

ತಿಪಟೂರು ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:33 IST
Last Updated 26 ಅಕ್ಟೋಬರ್ 2021, 3:33 IST
ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ತಾಲ್ಲೂಕು ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು
ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ತಾಲ್ಲೂಕು ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು   

ತಿಪಟೂರು: ನಗರಸಭೆ ಪೌರಾಯುಕ್ತ ಉಮಾಕಾಂತ್ ಶನಿವಾರ ನಗರದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿರುವುದನ್ನು ವಿರೋಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಕಾಂಗ್ರೆಸ್ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಯಿತು.

ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸೋಮವಾರ ಪೌರಾಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡಿ, ಅಧಿಕಾರಿಗಳು ಯಾವುದೇ ಸಂಘ, ಸಂಸ್ಥೆಗಳೊಂದಿಗೆ ಸೇರಿಕೊಳ್ಳಬಾರದೆಂಬ ಸೂಚನೆಯಿದ್ದರೂ ಪೌರಾಯುಕ್ತರು ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಪಥ ಸಂಚಲನದಲ್ಲಿ ಗಣವೇಷ ಧರಿಸಿ ಭಾಗವಹಿಸಿರುವುದು ಖಂಡನೀಯ ಎಂದರು.

ADVERTISEMENT

ಸರ್ಕಾರಿ ಅಧಿಕಾರಿಗಳು ಎಲ್ಲಾ ಜನಾಂಗದವರನ್ನು ಒಂದೇ ರೀತಿಯಲ್ಲಿ ಕಾಣುವಂತಹ ಮನಸ್ಥಿತಿ ಹೊಂದಿರಬೇಕು. ಆದರೆ, ಪೌರಾಯುಕ್ತರು ಆರ್‌ಎಸ್‌ಎಸ್‌ಗೆ ಪೂರ್ಣ ಬೆಂಬಲ ನೀಡಿ ಭಾಗಿಯಾಗಿರುವುದು ಕರ್ತವ್ಯಲೋಪ ಎಸಗಿದಂತಾಗಿದೆ. ನಗರದಲ್ಲಿ ಇರುವಂತಹ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಈ ಹಿಂದೆ ತಾಲ್ಲೂಕಿನ ಶಾಸಕರು, ಮಂತ್ರಿ ಆದ ವೇಳೆ ನಗರದ ಕೆಂಪಮ್ಮದೇವಿ ದೇಗುಲದಲ್ಲಿ ಮಡೆಸ್ನಾನ ಮಾಡಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದರು. ಇಂತಹ ಘಟನೆಗಳು ಸರ್ಕಾರಿ ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಜೊತೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್ ಮಾತನಾಡಿ, ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಕಾಳಜಿ ವಹಿಸುವ ಬದಲು ವೈಯಕ್ತಿಕ ಚಟುವಟಿಕೆಯಲ್ಲಿ ತೊಡಗುವುದು ಅಪರಾಧವಾಗುತ್ತದೆ. ಪೌರಾಯುಕ್ತರು ಕಚೇರಿಯಲ್ಲಿ ಜನಸೇವೆ ಮಾಡಬೇಕು. ಸಂಘ-ಸಂಸ್ಥೆಗಳಿಗೆ ಸೇವೆ ನೀಡುವಂತಹ ಕಾರ್ಯ ಮಾಡಬಾರದು ಎಂದರು.

ನಗರಸಭೆ ಸದಸ್ಯರಾದ ಮೇಘಶ್ರೀ, ಊರ್ ಬಾನು, ವಿನುತಾ, ಯೋಗೇಶ್, ಮಹೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸೈಫುಲ್ಲಾ, ತಾ.ಪಂ. ಮಾಜಿ ಅಧ್ಯಕ್ಷ ಜಿ.ಎಸ್. ಶಿವಸ್ವಾಮಿ, ಮಾಜಿ ಸದಸ್ಯ ಮಣಕೀಕೆರೆ ರವಿಕುಮಾರ್, ಸಿದ್ದಾಪುರ ಸುರೇಶ್, ಬಜಗೂರು ಮಂಜುನಾಥ್, ಮಾಜಿ ಸದಸ್ಯ ನದೀಮ್ ಪಾಷ, ಶ್ರೀನಿವಾಸ್, ಲೋಕನಾಥ್ ಸಿಂಗ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.