ADVERTISEMENT

ಪರಿಶಿಷ್ಟರ ಹಣ; ಮತ್ತೊಂದು ಇಲಾಖೆಗೆ ಸಲ್ಲದು

ಕರ್ನಾಟಕ ಮಾದಿಗ ದಂಡೋರ ಹಾಗೂ ಛಲವಾದಿ ಮಹಾಸಭಾ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 2:44 IST
Last Updated 13 ಅಕ್ಟೋಬರ್ 2020, 2:44 IST
ಚನ್ನಬಸವಯ್ಯ
ಚನ್ನಬಸವಯ್ಯ   

ತುಮಕೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಸರ್ಕಾರ ₹ 30,445 ಕೋಟಿ ಮೀಸಲಿಟ್ಟಿತ್ತು. ಈ ಹಣವನ್ನು ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಖರ್ಚು ಮಾಡಿಲ್ಲ. ಉಳಿದ ₹ 19,000 ಕೋಟಿಯನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಇದನ್ನು ಖಂಡಿಸಲಾಗುವುದು ಎಂದು ಕರ್ನಾಟಕ ಮಾದಿಗ ದಂಡೋರ ಹಾಗೂ ಛಲವಾದಿ ಮಹಾಸಭಾ ತಿಳಿಸಿವೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, ‘ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಖರ್ಚಾಗದೆ ಉಳಿದಿರುವ ಹಣವನ್ನು ಹರಿಜನ, ಗಿರಿಜನ ಕಲ್ಯಾಣಕ್ಕೆ ಸಂಬಂಧಿಸಿದ ಇಲಾಖೆ ಅಥವಾ ಅಭಿವೃದ್ಧಿ ನಿಗಮಗಳಿಗೆ ವರ್ಗಾಯಿಸಬೇಕಿತ್ತು. ಕಾರಜೋಳ ಅವರಿಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ’ ಎಂದು ಟೀಕಿಸಿದರು.

ಈ ಹಣವನ್ನು ವಾಪಸ್ ಪಡೆದು ನಮ್ಮ ಜನಾಂಗದ ಅಭಿವೃದ್ಧಿಗೆ ಬಳಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಈ ಹಿಂದೆ ಪರಿಶಿಷ್ಟರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರು. ಆ ಪಕ್ಷಕ್ಕೆ ಸರ್ಕಾರ ರಚನೆಯ ಶಕ್ತಿ ತುಂಬಿದ್ದೆವು. ಇತ್ತೀಚೆಗೆ ‌ಬಿಜೆಪಿ ಬೆಂಬಲಿಸಿ, ಸರ್ಕಾರ ರಚನೆಗೆ ಶಕ್ತಿ ತುಂಬಿರುವುದನ್ನು ಸಚಿವರು ಮರೆಯಬಾರದು ಎಂದು ಹೇಳಿದರು.

ADVERTISEMENT

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇ 22.75ರಷ್ಟು ಅನುದಾನವನ್ನು ಸರ್ಕಾರದ ನಿಯಮಾನುಸಾರ ಕ್ರಿಯಾಯೋಜನೆ ರೂಪಿಸಿ ಖರ್ಚು ಮಾಡುವ ವ್ಯವಸ್ಥೆ ಪಾಲನೆ ಆಗಬೇಕು ಎಂದರು.

ಛಲವಾದಿ ಮಹಾಸಭಾದ ವಸಂತಕುಮಾರ್, ಸಾವಿರಾರು ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಇವೆ. ಭರ್ತಿಗೆ ಕ್ರಮಕೈಗೊಳ್ಳಬೇಕು. ಎಸ್‍ಸಿ, ಎಸ್‍ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಯಾದ ಹಣ ಪೂರ್ಣ ಪ್ರಮಾಣದಲ್ಲಿ ಖರ್ಚಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಈಚನೂರು ಮಹಾದೇವ್, ಬಿದಲೋಟಿ ಹನುಮಂತರಾಜು, ನಾಗರಾಜು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.