ADVERTISEMENT

ಚಿಕ್ಕನಾಯಕನಹಳ್ಳಿ: ಆಕಾಶದತ್ತ ರೈತರ ಚಿತ್ತ

ಮಳೆ ಕೊರತೆ ನಡುವೆ ಶೇ 65ರಷ್ಟು ಬಿತ್ತನೆ ಪೂರ್ಣ

ಆರ್.ಸಿ.ಮಹೇಶ್
Published 9 ಆಗಸ್ಟ್ 2021, 4:43 IST
Last Updated 9 ಆಗಸ್ಟ್ 2021, 4:43 IST
ಬಿತ್ತನೆಯಾಗಿರುವ ರಾಗಿ ಪೈರು ಒಣಗುತ್ತಿದೆ
ಬಿತ್ತನೆಯಾಗಿರುವ ರಾಗಿ ಪೈರು ಒಣಗುತ್ತಿದೆ   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ವ್ಯಾಪ್ತಿಯ ಎಲ್ಲ ರೈತರ ಬಾಯಲ್ಲೂ ಕೇಳಿ ಬರುವ ಪಠಣವೊಂದೇ ಮಳೆ ಯಾವಾಗ ಬರುತ್ತೇ? ಹಿಂಗಾರು ಬೆಳೆ ರಾಗಿ ಬಿತ್ತಿದ- ಬಿತ್ತದ ರೈತರಲ್ಲಿ ಮುಂದೇನು ಎಂಬ ಅತಂಕದ ನಡುವೆಯೂ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 65ರಷ್ಟು ಬಿತ್ತನೆಯಾಗಿದೆ.

ಈ ಬಾರಿ ಮುಂಗಾರು ಪೂರ್ವ ಬಿತ್ತನೆಯ ಹೆಸರು, ಅಲಸಂದೆ ಸ್ವಲ್ಪ ಮಟ್ಟಿಗೆ ಕೈ ಹಿಡಿದಿದೆ. ಆದರೆ ಹಿಂಗಾರು ಬಿತ್ತನೆ ಸಂಪೂರ್ಣ ನೆಲಕಚ್ಚಿದೆ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಮಳೆಗಳು ಕೆಲ ಕಡೆ ಮಾತ್ರ ಸೋನೆ ಸಿಂಚನವಾಗಿ ರೈತರಲ್ಲಿ ಹಿಂಗಾರು ಕೈ ಹಿಡಿಯುವ ಆಶಾಭಾವ ತೋರಿತ್ತು. ಆದರೆ ನಂತರದ ದಿನಗಳಲ್ಲಿ ಆಗಸ್ಟ್‌ ತಿಂಗಳ ಮಧ್ಯ ಭಾಗಕ್ಕೆ ಬಂದರೂ ಬಿತ್ತನೆಗೆ ಪೂರಕ ಮಳೆ ಆಗುತ್ತಿಲ್ಲ. ರೋಹಿಣಿ ಮಳೆ ನಂತರ ಮೃಗಶಿರಾ, ಆರ್ದ್ರಾ, ಪುಷ್ಯ, ಪುನರ್ವಸು ಮಳೆಗಳು ಸಂಪೂರ್ಣವಾಗಿ ಕೈ ಕೊಟ್ಟಿವೆ.

ಬಿತ್ತನೆ ಆರಂಭದ ಜುಲೈ ತಿಂಗಳ ಮೊದಲ ವಾರದಿಂದ ಆಗಸ್ಟ್‌ ಮೊದಲ ವಾರದ ತನಕ ಸಂಪೂರ್ಣ ಹದ ಮಳೆ ಬಂದಿಲ್ಲ. ಈಗಾಗಲೇ ಆಶ್ಲೇಷಾ ಮಳೆ ಮುಗಿಯುತ್ತಾ ಬಂದಿದ್ದು ಬಿತ್ತನೆ ಸಮಯ ಮುಗಿದು ಹೋಗುವ ಅತಂಕ ಎದುರಾಗಿದೆ. ತಾಲ್ಲೂಕು ವ್ಯಾಪ್ತಿಯ ಕೆಲವೆಡೆ ಮಾತ್ರ ಸೋನೆ ಮಳೆಯಾಗಿದೆ. ಉಳಿದಂತೆ ಬರೀ ಮೋಡ ಮುಸುಕಿದ ವಾತಾವರಣವೇ ಕಂಡು ಬಂದಿದೆ. ಆಗಾಗ ಗಾಳಿಯಲ್ಲಿ ತೇಲಿ ಬರುತ್ತಿದ್ದ ಸೋನೆಗೆ ಹದವಾಗಿದ್ದ ಹೊಲಕ್ಕೆ ಹೋಗಿ ನಿರಾಸೆಯಿಂದ ಬರುತ್ತಿದ್ದರು. ಇನ್ನೂ ಕೆಲವೆಡೆ ಬಿತ್ತನೆಯ ಪೂರಕ ಸಮಯ ಮುಗಿಯುತ್ತದೆ ಎಂದು ಬಿತ್ತನೆ ಮಾಡಿದ ರೈತರು ಹೊಲದಲ್ಲಿ ಪೈರು ಒಣಗುತ್ತಿರುವುದನ್ನು ನೋಡಿ ಆಕಾಶದತ್ತ ಮುಖ ಮಾಡಿದ್ದಾರೆ. ಬಿತ್ತನೆ ಮಾಡಿ ಸೋನೆ ಮಳೆಗೆ ಹುಟ್ಟಿರುವ ಪೈರು ಮಳೆಯಿಲ್ಲದೆ ಒಣಗುತ್ತಿದೆ.

ADVERTISEMENT

ಕಳೆದರೆಡು ದಿನಗಳಿಂದ ಬಿಸಿಲಿನ ಉಷ್ಣತೆ ತೀವ್ರವಾಗಿದ್ದು, ಪೈರುಗಳು ನೆಲದಲ್ಲಿಯೇ ಕಮರಿ ಹೋಗುತ್ತಿದೆ. ತೆಂಗು, ಅಡಿಕೆ ಸೇರಿದಂತೆ ಇತರ ಬೆಳೆಗಳಿಗೂ ಮಳೆ ಬಾರದಿರುವುದು ಸಂಕಷ್ಟ ತಂದೊಡ್ಡಿದೆ. ಮುಂಗಾರಿನ ವೇಳೆ ಒಮ್ಮೆ ಕೆರೆ, ಕಟ್ಟೆಗಳು ತುಂಬಿದ್ದರೆ ತೊಂದರೆಯಾಗುತ್ತಿರಲಿಲ್ಲ. ಹಿಂಗಾರಿನ ಮಳೆಯೂ ರೈತರನ್ನು ಕೈಹಿಡಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಗುರುವಾಪುರ ಗ್ರಾಮದ ಬಿ.ಎಲ್.ರೇಣುಕಪ್ರಸಾದ್‌ ಅತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.