ADVERTISEMENT

ಕೂಲಿಗೆ ಬಾರದ ಪರಿಶಿಷ್ಟ ಜಾತಿಯವರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:39 IST
Last Updated 23 ಜುಲೈ 2020, 16:39 IST
ಕುಣಿಗಲ್ ತಾಲ್ಲೂಕು ಹನುಮೇಗೌಡನಪಾಳ್ಯದ ಕಾಲೊನಿಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದವರು ಖಂಡನಾ ಸಭೆ ನಡೆಸಿದರು
ಕುಣಿಗಲ್ ತಾಲ್ಲೂಕು ಹನುಮೇಗೌಡನಪಾಳ್ಯದ ಕಾಲೊನಿಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದವರು ಖಂಡನಾ ಸಭೆ ನಡೆಸಿದರು   

ಕುಣಿಗಲ್: ಕೂಲಿ ಕೆಲಸಕ್ಕೆ ಬಾರದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮೇಗೌಡನಪಾಳ್ಯ ಕಾಲೊನಿಯ ಪರಿಶಿಷ್ಟ ಜಾತಿಯವರಿಗೆ ಬಹಿಷ್ಕಾರ ಹಾಕುವ ಪ್ರಯತ್ನ ನಡೆದಿದ್ದು, ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಹನುಮೇಗೌಡನಪಾಳ್ಯ ಕಾಲೊನಿಯಲ್ಲಿ 18 ಮನೆಗಳಿದ್ದು, ಇದರಲ್ಲಿ 9 ಪರಿಶಿಷ್ಟ ಜಾತಿಯ ಕುಟುಂಬಗಳು ವಾಸಿಸುತ್ತಿವೆ. ಮೊದಲಿಗೆ ಜೀವನೋಪಾಯಕ್ಕೆ ಸವರ್ಣೀಯರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೊರೊನಾ ಪರಿಣಾಮ ಕೂಲಿ ಕೆಲಸ ಸಿಗದೇ ಗೂಡ್ಸ್‌‌ ಆಟೊ ಖರೀದಿಸಿ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದರು.

ಕೂಲಿಗೆ ಬಾರದೆ ವ್ಯಾಪಾರ ಕೈಗೊಂಡಿದ್ದರಿಂದ ಅಸಮಾಧಾನಗೊಂಡ ಗ್ರಾಮದ ಯುವಕರ ಗುಂಪು, ‘ವ್ಯಾಪಾರದ ಸಲುವಾಗಿ ಊರೂರು ಅಲೆದುಕೊಂಡು ಬಂದು ಕೊರೊನಾ ಸೋಂಕು ತರುತ್ತೀರಾ’ ಎಂದು ಹೇಳಿ ವ್ಯಾಪಾರಕ್ಕೆ ಹೋಗದಂತೆ ಒಂದು ತಿಂಗಳಿಂದ ಅಡ್ಡಿಪಡಿಸುತ್ತಿದ್ದರು’ ಎನ್ನಲಾಗಿದೆ.

ADVERTISEMENT

ಬುಧವಾರ ರಾತ್ರಿ 25 ಮಂದಿ ಸವರ್ಣೀಯರ ಗುಂಪು ಕಾಲೊನಿಗೆ ನುಗ್ಗಿ, ವ್ಯಾಪಾರಕ್ಕೆ ಹೋಗದಂತೆ ಎಚ್ಚರಿಕೆ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಕಾಲೊನಿ ಸಂಪರ್ಕ ರಸ್ತೆಗೆ ಮುಳ್ಳಿನ ಬೇಲೆ ಹಾಕಿದ್ದು, ಗ್ರಾಮದಿಂದ ಬಹಿಷ್ಕರಿಸುವ ಬೆದರಿಕೆ ಹಾಕಿದೆ. ಅದನ್ನು ಪ್ರಶ್ನಿಸಿ ಬೇಲಿ ಕೀಳಲು ಮುಂದಾದವರ ಮೇಲೆ ಹಲ್ಲೆ ಮಾಡಲಾಗಿದೆ.

ರಾತ್ರಿಯೇ ಕಾಲೊನಿಗೆ ಬಂದ ಪೊಲೀಸರು, ಬೇಲಿ ತೆರವುಗೊಳಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ಆನಂದ್ ಒತ್ತಾಯಿಸಿದರು. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.