ತಿಪಟೂರು: ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಗೈರಿನ ನಡುವೆ ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷೆ ಯಮುನಾ ಎ.ಎಸ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.
ಸದಸ್ಯ ನಹಿಂ ಪಾಷ ಮಾತನಾಡಿ, ವಾರ್ಡ್‌ನಲ್ಲಿ ಅಳವಡಿಸಿರುವ ಮೋಟರ್ ಹಾಗೂ ಕೇಬಲ್‌ಗಳು ಪದೇ ಪದೇ ಕೆಟ್ಟು ಹೋಗುತ್ತಿವೆ. ಕಳಪೆ ಗುಣಮಟ್ಟದ ಸಲಕರಣೆಗಳನ್ನು ಅಳವಡಿಸಿದ್ದಾರೆ. ದುರಸ್ತಿ ಮಾಡಿದರೂ ವಾರದೊಳಗೆ ಕೆಟ್ಟುಹೋಗುತ್ತಿವೆ ಎಂದು ದೂರಿದರು.
ಆಡಳಿತ ಪಕ್ಷದ ಸದಸ್ಯ ಮಹೇಶ್ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾಗಿರುವ ವಿದ್ಯಾರ್ಥಿ ವೇತನದಲ್ಲಿ ತಾರತಮ್ಯವಾಗುತ್ತಿದೆ. ಅರ್ಜಿಗಳನ್ನು ಆಹ್ವಾನಿಸದೆ, ಹಣವನ್ನು ಮೀಸಲಿಡದೆ ವಿದ್ಯಾರ್ಥಿ ಪುರಸ್ಕಾರಗಳನ್ನು ನೀಡುತ್ತೇವೆ ಎಂಬುದಾಗಿದ್ದು ಇದರಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯ ಪ್ರಕಾಶ್ ಮಾತನಾಡಿ, ಕ್ರಿಯಾ ಯೋಜನೆ ಮಾಡುವಾಗ ನಗರದ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗುತ್ತದೆ. ಪ.ಜಾತಿ, ಪಂಗಡ, ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕಿದೆ ಎಂದರು.
ನಗರಸಭಾ ವ್ಯಾಪ್ತಿಯ ಕೋಟೆ, ಗಾಂಧಿ ಪಾರ್ಕ್, ನಗರಸಭೆ ಆವರಣ, ಐ.ಬಿ ವೃತ್ತದಲ್ಲಿ ಪೌರಕಾರ್ಮಿಕ ಸ್ಥಾನದ ಗೃಹ ಹಾಗೂ ಶೌಚಾಲಯ ದುರಸ್ತಿ ಹಾಗೂ ನವೀಕರಣಕ್ಕೆ ಅನುಮೋದನೆ, ರಸ್ತೆಗಳ ದುರಸ್ತಿ, ಅವಶ್ಯಕತೆಯಿರುವ ಕಡೆಗೆ ಕುಡಿಯುವ ನೀರಿನ ಪೈಪ್‌ಲೈನ್ ಸೌಲಭ್ಯವನ್ನು ಒದಗಿಸಲು ಅನುಮೋದನೆ, ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರ ಆಯ್ಕೆ, ಹೆಚ್ಚುವರಿಯಾಗಿ ಹೊರಗುತ್ತಿಗೆ ಮೇರೆಗೆ ಪದವೀಧರ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವಂತೆ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಮೇಘಶ್ರೀ ಸುಜಿತ್ ಭೂಷಣ್, ಪೌರಯುಕ್ತ ವಿಶ್ವೇಶ್ವರ ಬದರಗಡೆ, ಸದಸ್ಯರಾದ ಯೋಗೀಶ್, ಓಹಿಲಾ ಗಂಗಾಧರ್, ವಿನುತಾ ತಿಲಕ್, ಹೂರುಬಾನು, ಸೊಪ್ಪು ಗಣೇಶ್, ಮಹಮದ್ ಗೌಸ್, ಲೋಕನಾಥ್ ಸಿಂಗ್, ಪ್ರಸಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.