ತಿಪಟೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಅಧಿಕಾರ ಹಿಡಿಯಲು ಬಿಜೆಪಿ, ಕಾಂಗ್ರೆಸ್ ತೀವ್ರ ಪ್ರಯತ್ನದಲ್ಲಿ ತೊಡಗಿವೆ.
ಮುಂದಿನ 20 ತಿಂಗಳ ಅವಧಿಗೆ ತಿಪಟೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜೆಡಿಎಸ್‍ನಿಂದ ಬಿಜೆಪಿಗೆ ಬಂದಿರುವ ಲೋಕೇಶ್ವರ ಅವರು ಶಾಸಕ ನಾಗೇಶ್ ಅವರೊಂದಿಗೆ ಸೇರಿ ಮೊದಲಿಗೆ ಎಪಿಎಂಸಿ ಅಧಿಕಾರವನ್ನು ಕಾಂಗ್ರೆಸ್‍ನಿಂದ ಕಸಿದುಕೊಳ್ಳಲು ಲೆಕ್ಕಾಚಾರ ನಡೆಸಿದ್ದಾರೆ. ಮಂದೆ ಅದು ನಗರಸಭೆ ಚುನಾವಣೆಗೂ ಅನ್ವಯವಾಗುವಂತೆ ಕಾಣುತ್ತಿದೆ.
ಸದ್ಯ ಕಾಂಗ್ರೆಸ್ ಬೆಂಬಲಿತರು 40 ತಿಂಗಳ ಅಧಿಕಾರ ನಡೆಸಿದ್ದಾರೆ. 13 ನಿರ್ದೇಶಕ ಸ್ಥಾನಗಳಿದ್ದು, 3 ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ ಒಟ್ಟು 16 ಸ್ಥಾನಗಳಿವೆ. ಅವುಗಳಲ್ಲಿ ಅನಾರೋಗ್ಯ ಕಾರಣದಿಂದಾಗಿ ಕಾಂಗ್ರೆಸ್ ಬೆಂಬಲಿಗರ 2 ಸ್ಥಾನಗಳು ತೆರವಾಗಿದ್ದು, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸದಸ್ಯರಾಗಿದ್ದ ಕೆ.ಷಡಕ್ಷರಿ ಅವಧಿ ಮುಗಿದಿದೆ. ಹಾಗಾಗಿ ಒಟ್ಟು ಸಂಖ್ಯೆ 13ಕ್ಕೆ ಇಳಿದಿದೆ.
ಜತೆಗೆ ರಾಜ್ಯ ಸರ್ಕಾರದ ಬದಲಾವಣೆಯಿಂದ 3 ನಾಮಿನಿ ಸದಸ್ಯರನ್ನು ಕಳೆದುಕೊಂಡಿರುವ ಕಾಂಗ್ರೆಸ್ ತನ್ನ ಸಂಖ್ಯಾಬಲದಲ್ಲಿ ಕುಗ್ಗಿದೆ. ಅಲ್ಲದೇ ಜೆಡಿಎಸ್‍ನಲ್ಲಿದ್ದ ಲೋಕೇಶ್ವರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಅವರ ಬೆಂಬಲಿತ 2 ಇಬ್ಬರು ನಿರ್ದೇಶಕರು ಸಹ ಬಿಜೆಪಿ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿರುವುದು ಕಾಂಗ್ರೆಸ್‍ಗೆ ತಲೆನೋವಾಗಿದೆ.
ಒಂದಾದ ನಾಯಕರು: ಬಿಜೆಪಿಯಿಂದ ಜೆಡಿಎಸ್‍ಗೆ ಹೋಗಿದ್ದ ಲೋಕೇಶ್ವರ ಪುನಃ ಬಿಜೆಪಿಗೆ ಮರಳಿದ್ದು, ಶಾಸಕ ಬಿ.ಸಿ.ನಾಗೇಶ್ ಸೇರಿದಂತೆ ಕೆಲ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಗರ ಸಂಖ್ಯೆ 6ಕ್ಕೆ ಹಾಗೂ ಬಿಜೆಪಿ ಬೆಂಬಲಿಗರ ಸಂಖ್ಯೆ 7ಕ್ಕೆ ಹೆಚ್ಚಳವಾಗಿದ್ದು, ಬಿಜೆಪಿ ಬೆಂಬಲಿಗರು ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪ್ರತಿತಂತ್ರ: ಜೆಡಿಎಸ್ ಬೆಂಬಲದಿಂದ ರಂಗಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ತರಕಾರಿ ನಾಗರಾಜು ಅವರನ್ನು ಕಾಂಗ್ರೆಸ್ ಸೆಳೆಯುವ ಯತ್ನದಲ್ಲಿದೆ. ನಾಗರಾಜು ಅವರು ಲೋಕೇಶ್ವರ ಬೆಂಬಲಕ್ಕೆ ನಿಂತು ಬಿಜೆಪಿಗೆ ಅಧಿಕಾರ ದೊರಕಿಸುತ್ತಾರೋ ಅಥವಾ ಕಾಂಗ್ರೆಸ್ ಬೆಂಬಲಿಸುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.