ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ತುಮಕೂರುವರೆಗೆ ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಎರಡು ವರ್ಷಗಳಾದರೂ ಅನುಮತಿ ಸಿಕ್ಕಿಲ್ಲ. ಆದರೆ, ನಗರದೊಳಗೆ ಮಾತ್ರ ಸಂಚರಿಸಲು ಅವಕಾಶ ಇರುವ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ಅನುಮತಿ ಸಿಕ್ಕಿ, ಕಾರ್ಯಸಾಧ್ಯತಾ ಅಧ್ಯಯನವೂ ಮುಕ್ತಾಯವಾಗಿದೆ.
ಕೋಲಾರ, ತುಮಕೂರು, ಮಾಗಡಿ, ಮೈಸೂರು, ಬಂಗಾರಪೇಟೆ, ಹೊಸೂರು, ಗೌರಿಬಿದನೂರಿಗೆ ಉಪ ನಗರ ರೈಲು ವಿಸ್ತರಿಸಿದರೆ ಬೆಂಗಳೂರು ಮತ್ತು ಆ ಉಪ ನಗರಗಳ ಮಧ್ಯೆ ಸಂಪರ್ಕ ಇನ್ನಷ್ಟು ಸುಲಲಿತವಾಗಲಿದೆ. ಪ್ರಯಾಣಿಕರು ಸುಲಭವಾಗಿ ರಾಜ್ಯದ ರಾಜಧಾನಿಗೆ ಬಂದು, ಹಿಂತಿರುಗಬಹುದು. ಅದಕ್ಕಾಗಿ ಒಟ್ಟು 452 ಕಿ.ಮೀ. ಉದ್ದದ ಮಾರ್ಗದಲ್ಲಿ ವಿಸ್ತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (ಕೆ- ರೈಡ್) ರೈಲ್ವೆ ಮಂಡಳಿಗೆ 2023ರ ಜುಲೈನಲ್ಲಿ ಪತ್ರ ಬರೆದಿತ್ತು.
ನೈರುತ್ಯ ರೈಲ್ವೆಯಿಂದ ಈಗಾಗಲೇ ಈ ಮಾರ್ಗಗಳಲ್ಲಿ ರೈಲುಗಳು ಸಂಚರಿಸುತ್ತಿದ್ದು, ಮುಂದೆ ಮೂಲಸೌಕರ್ಯ ಮತ್ತು ರೈಲುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಜೊತೆಗೆ ವೃತ್ತ ರೈಲು ನಿರ್ಮಾಣ ಯೋಜನೆ ಕೂಡಾ ಇದೆ. ಹಾಗಾಗಿ ಕೆ–ರೈಡ್ ಕಾರ್ಯಸಾಧ್ಯತಾ ಅಧ್ಯಯನ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ನೈರುತ್ಯ ರೈಲ್ವೆ ಸ್ಪಷ್ಟನೆ ನೀಡಿ ಕೆ–ರೈಡ್‌ನ ಪ್ರಸ್ತಾವಕ್ಕೆ ಒಪ್ಪಿಗೆ ನಿರಾಕರಿಸಿತ್ತು.
ಬಿಎಸ್‌ಆರ್‌ಪಿ ಪ್ರಸಾವಿತ ಯೋಜನೆ
107 ಕಿ.ಮೀ. ದೇವನಹಳ್ಳಿ–ಕೋಲಾರ
55 ಕಿ.ಮೀ. ಚಿಕ್ಕಬಾಣಾವರ–ತುಮಕೂರು
45 ಕಿ.ಮೀ. ಚಿಕ್ಕಬಾಣಾವರ–ಮಾಗಡಿ
125 ಕಿ.ಮೀ. ಕೆಂಗೇರಿ–ಮೈಸೂರು
45 ಕಿ.ಮೀ. ವೈಟ್‌ಫೀಲ್ಡ್–ಬಂಗಾರಪೇಟೆ
23 ಕಿ.ಮೀ. ಹೀಲಲಿಗೆ–ಹೊಸೂರು
62 ಕಿ.ಮೀ. ರಾಜಾನುಕುಂಟೆ–ಗೌರಿಬಿದನೂರು
ನೈರುತ್ಯ ರೈಲ್ವೆಯು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು 2024ರ ಮಾರ್ಚ್‌ನಲ್ಲಿ ಕೆ–ರೈಡ್ ಮತ್ತೆ ಪತ್ರ ಬರೆದಿತ್ತು. ಸುತ್ತಲಿನ ನಗರಗಳಿಗೆ ಉಪನಗರ ಯೋಜನೆ ವಿಸ್ತರಿಸಿದಾಗ ಪ್ರತಿ ಊರಿನಲ್ಲಿ ನಿಲ್ದಾಣಗಳಿರುತ್ತವೆ. ಪ್ರತಿ 2–3 ಕಿ.ಮೀ. ದೂರದಲ್ಲಿ ಒಂದು ನಿಲ್ದಾಣ ಇರಲಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ವೃತ್ತ ರೈಲು ಸಂಪರ್ಕ ಜಾಲದ ಮೂಲಕವೇ ಬಿಎಸ್‌ಆರ್‌ಪಿ ಪ್ರಸ್ತಾವಿತ ಯೋಜನೆ ಹಾದು ಹೋಗುವುದರಿಂದ ಇನ್ನಷ್ಟು ಅನುಕೂಲವಾಗಲಿದೆ ಎಂದು ಎರಡನೇ ಪತ್ರದಲ್ಲಿ ಕೆ–ರೈಡ್ ವಿವರಿಸಿತ್ತು. ಈ ಪತ್ರಕ್ಕೆ ನೈರುತ್ಯ ರೈಲ್ವೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
‘ನಮ್ಮ ಮೆಟ್ರೊವನ್ನು ತುಮಕೂರಿಗೆ ವಿಸ್ತರಿಸಲು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿ’ ಎಂದು ಈ ನಡುವೆ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿತ್ತು. ಖಾಸಗಿ ಕಂಪನಿ ಮೂಲಕ ಅಧ್ಯಯನ ಮಾಡಿಸಿದ ಬಿಎಂಆರ್‌ಸಿಎಲ್ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
‘ಉಪನಗರ ರೈಲು ಯೋಜನೆಯನ್ನು ಬೆಂಗಳೂರಿನ ಸುತ್ತಲಿನ ಉಪ ನಗರಗಳಿಗೆ ವಿಸ್ತರಿಸಲು ಅವಕಾಶವಿದೆ. ಅದಕ್ಕಾಗಿ ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದಕ್ಕಾಗಿ ಅನುಮತಿ ಪಡೆಯಲು ರಾಜ್ಯ ಸರ್ಕಾರದ ಸೂಚನೆಯಂತೆ ನೈರುತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿತ್ತು. ಅದರಲ್ಲಿ ಚಿಕ್ಕಬಾಣಾವರದಿಂದ ತುಮಕೂರಿಗೆ 55 ಕಿ.ಮೀ. ವಿಸ್ತರಿಸುವ ಯೋಜನೆಯೂ ಒಳಗೊಂಡಿತ್ತು. 2023ರ ಜುಲೈಯಿಂದ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಅನುಮತಿ ಸಿಗದೇ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಅವಕಾಶ ನೀಡುವ ಬದಲು ಬಿಎಸ್‌ಆರ್‌ಪಿಗೆ ಅನುಮತಿ ಸಿಗುವಂತೆ ಒತ್ತಡ ತಂದಿದ್ದರೆ ಹಿನ್ನಡೆಯಾಗುತ್ತಿರಲಿಲ್ಲ’ ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
ಕಾರ್ಯ ಸಾಧುವಲ್ಲದ ಯೋಜನೆ
ಬೆಂಗಳೂರು–ತುಮಕೂರು ಮೆಟ್ರೊ ಸಂಚಾರ ಕಾರ್ಯಸಾಧುವಲ್ಲ. ವೆಚ್ಚ, ಸಮಯ, ಪ್ರಯಾಣ ದರ ಎಲ್ಲವೂ ಅಧಿಕವಾಗುವುದರಿಂದ ವಿಫಲಗೊಳ್ಳುವ ಸಾಧ್ಯತೆ ಇದೆ. ಅದಕ್ಕಿಂತ ಉಪ ನಗರ ರೈಲು ಯೋಜನೆಯಾದರೆ ಕಡಿಮೆ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಬಹುದು. ಪ್ರಯಾಣ ದರವೂ ಕಡಿಮೆ ಇರುತ್ತದೆ. ಈಗಿನ ಮೆಟ್ರೊ ದರದ ಪ್ರಕಾರ ಮಾದಾವರದಿಂದ ತುಮಕೂರಿಗೆ ಹೋಗಲು ಕನಿಷ್ಠ ₹ 125 ನೀಡಬೇಕಾಗುತ್ತದೆ. ಅದೇ ಈಗ ರೈಲಿನಲ್ಲಿ ಬೆಂಗಳೂರಿನಿಂದ ತುಮಕೂರಿಗೆ ₹ 20 ಇದೆ. ಉಪ ನಗರ ರೈಲಿಗೆ ಇದರ ಎರಡೂವರೆ ಪಟ್ಟು ಅಂದರೂ ₹ 50ರಷ್ಟು ಆಗಬಹುದು.– ರಾಜಕುಮಾರ್ ದುಗರ್, ಸಿಟಜನ್ಸ್ ಫಾರ್ ಸಿಟಿಜನ್ಸ್ (ಸಿ4ಸಿ) ಸಂಸ್ಥಾಪಕ
ಮೆಟ್ರೊ ಯೋಜನೆ ಘೋಷಣೆಯಷ್ಟೇ ಇರಬೇಕು
ಮೆಟ್ರೊ ರೈಲು ಸಂಪರ್ಕ ಮಾರ್ಗವು ಹೆದ್ದಾರಿಯ ನಡುವೆ ಇಲ್ಲವೇ ಪಕ್ಕದಿಂದಲೇ ಹಾದು ಹೋಗುವುದರಿಂದ ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಉಪ ನಗರ ರೈಲು ಈಗಿರುವ ರೈಲು ಹಳಿಗಳ ಪಕ್ಕದಲ್ಲಿ ಹಾದುಹೋಗುತ್ತದೆ. ರೈಲು ಸಂಪರ್ಕವಿಲ್ಲದ ಮಾಕಳಿ, ನೆಲಮಂಗಲ, ಟಿ. ಬೇಗೂರಿನಂತಹ ಕೆಲವು ಪ್ರದೇಶಗಳನ್ನು ಮೆಟ್ರೊ ಸಂಪರ್ಕಸುತ್ತದೆ ಎಂಬುದಷ್ಟೇ ಸಕಾರಾತ್ಮಕ ಅಂಶ. ಮೆಟ್ರೊ ಯೋಜನೆ ಅನುಷ್ಠಾನ ತರಲು ಮಾಡಿದಂತಿಲ್ಲ. ಮೆಟ್ರೊ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಮಾಡಿದಂತೆ ಕಾಣುತ್ತಿದೆ.– ಕೆ.ಎನ್. ಕೃಷ್ಣಪ್ರಸಾದ್, ರೈಲ್ವೆ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.