ADVERTISEMENT

ಲಕ್ಷ ಟ್ರಾನ್ಸ್‌ಫಾರ್ಮರ್‌ ವಿತರಣೆ ಗುರಿ: ಸುನಿಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 11:06 IST
Last Updated 1 ಅಕ್ಟೋಬರ್ 2022, 11:06 IST
   

ತುಮಕೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಕೋರಿ 1.8 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ವಿತರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್ ಇಲ್ಲಿ ಶನಿವಾರ ಹೇಳಿದರು.

ನಗರದಲ್ಲಿ ಬೆಸ್ಕಾಂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಈಗಾಗಲೇ ₹10 ಸಾವಿರ ಹಣ ಕಟ್ಟಿದ 44,143 ಮಂದಿ ರೈತರು ಟ್ರಾನ್ಸ್‌ಫಾರ್ಮರ್‌ಗಾಗಿ ಕಾಯುತ್ತಿದ್ದಾರೆ. ₹50 ಕಟ್ಟಿದ 64,324 ರೈತರು ಈಗ ಮತ್ತೆ ₹10 ಸಾವಿರ ಹಣ ನೀಡಿ ಟ್ರಾನ್ಸ್‌ಫಾರ್ಮರ್‌ ಪಡೆಯಬಹುದು’ ಎಂದರು.

ಹಸಿರು ಇಂಧನಕ್ಕೆ ಹೆಚ್ಚಿನ ಒತ್ತು ನೀಡಲು, ಕೇಂದ್ರ ಸರ್ಕಾರದ ‘ಕುಸುಮ್‌–ಸಿ’ ಯೋಜ‌ನೆ‌ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ.‌ ರಾಜ್ಯದ 3.25 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 2.62 ಲಕ್ಷ ಜನರು ಇದರ ಲಾಭ ಪಡೆಯಲಿದ್ದಾರೆ. ಈ ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ ವೈಯಕ್ತಿಕವಾಗಿ ಸೋಲಾರ್ ಸಂಪರ್ಕ ಕಲ್ಪಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇನ್ನು ಮುಂದೆ ಇಡೀ ಫೀಡರ್‌ಗೆ ಸೋಲಾರ್ ಸಂಪರ್ಕ ಕಲ್ಪಿಸಲು ಚಿಂತಿಸಲಾಗಿದೆ. ‘ಕುಸುಮ್‌–ಸಿ’ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯ 695 ಫೀಡರ್‌, ಜಿಲ್ಲೆಯ 170 ಫೀಡರ್‌ಗಳಿಗೆ ಸೋಲಾರ್ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ADVERTISEMENT

ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 400 ಕೆ.ವಿ, ಸಿರಿವಾರ ಮತ್ತ ಸಂಪಿಗೆ ಹೊಸಹಳ್ಳಿ ಬಳಿ ತಲಾ 200 ಕೆ.ವಿ, ನಾಲ್ಕು ಕಡೆ 110 ಕೆ.ವಿ, ನಾಲ್ಕು ಕಡೆ, 66 ಕೆ.ವಿ ವಿದ್ಯುತ್‌ ಕೇಂದ್ರ ಆರಂಭಿಸುವ ಪ್ರಕ್ರಿಯೆ ನಡೆದಿದೆ ಎಂದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆ ವಿದ್ಯುತ್‌ ನೀಡಲಾಗುವುದು. ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ 24 ಗಂಟೆಯಲ್ಲಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ರಾಜ್ಯದಾದ್ಯಂತ 263 ದುರಸ್ತಿ ಕೇಂದ್ರ, 150ಕ್ಕೂ ಹೆಚ್ಚು ಕಡೆ ಟಿ.ಸಿ ಬ್ಯಾಂಕ್‌ ಮಾಡಲಾಗಿದೆ. ಇಂಧನ ಇಲಾಖೆಯಲ್ಲಿ ಎರಡೂವರೆ ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಹೊಸ ವಿಭಾಗೀಯ ಕಚೇರಿ ತೆರೆಯುವ ಕುರಿತು ಮುಂದಿನ ದಿನಗಳಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಸದ ಜಿ.ಎಸ್.ಬಸವರಾಜು, ‘ಬೆಸ್ಕಾಂನಲ್ಲಿ ಕೆಲವು ಕೆಟ್ಟ ಅಧಿಕಾರಿಗಳು ಇದ್ದು, ಅವರನ್ನು ನಿಯಂತ್ರಿಸುವ ಕೆಲಸ ಮಾಡಬೇಕು. ರೈತರ ಟ್ರಾನ್ಸ್‌ಫಾರ್ಮರ್‌ ಸರಿ ಮಾಡಿಕೊಡಲು ಇಲ್ಲಸಲ್ಲದ ತೊಂದರೆ ಕೊಡುತ್ತಾರೆ. ಜಿಲ್ಲೆಯಲ್ಲಿ ಬೆಸ್ಕಾಂ ವಿಭಾಗೀಯ ಕಚೇರಿ ಆರಂಭಿಸಬೇಕು. ದೊಡ್ಡ ಆಲದಮರದ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಒಪ್ಪಿಗೆ ನೀಡಿವೆ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಕೈಗಾರಿಕಾ ವಲಯಗಳಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಯಾವುದೇ ವಿದ್ಯುತ್ ಲೈನ್‌ ಕ್ಲಿಯರ್ ಇಲ್ಲ. ಉದ್ಯಮಿಗಳು ನಮ್ಮನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ.‌ ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.