ADVERTISEMENT

ತುಮಕೂರು | ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಾಜಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:41 IST
Last Updated 5 ಸೆಪ್ಟೆಂಬರ್ 2025, 5:41 IST
ತುಮಕೂರಿನಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎನ್.ರಾಜಣ್ಣ ಅವರನ್ನು ಅಭಿನಂದಿಸಲಾಯಿತು
ತುಮಕೂರಿನಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎನ್.ರಾಜಣ್ಣ ಅವರನ್ನು ಅಭಿನಂದಿಸಲಾಯಿತು   

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷರಾಗಿ ಆರನೇ ಬಾರಿಗೆ ಶಾಸಕ ಕೆ.ಎನ್.ರಾಜಣ್ಣ ಅವಿರೋಧವಾಗಿ ಗುರುವಾರ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮಧುಗಿರಿ ತಾಲ್ಲೂಕಿನ ಜೆ.ಜೆ.ರಾಜಣ್ಣ ಆಯ್ಕೆ ಆಗಿದ್ದಾರೆ. ಉಪವಿಭಾಗಾಧಿಕಾರಿ ನಾಹೀದಾ ಜಮ್‌ಜಮ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಡಿಸಿಸಿ ಬ್ಯಾಂಕ್‌ಗೆ ಆಯ್ಕೆಯಾದ ಒಟ್ಟು 14 ನಿರ್ದೇಶಕರಲ್ಲಿ ಎಲ್ಲರೂ ರಾಜಣ್ಣ ಬೆಂಬಲಿಗರು. ಹಾಗಾಗಿ ಅವಿರೋಧವಾಗಿ ಆಯ್ಕೆಯಾಗುವ ದಾರಿ ಸುಗಮವಾಗಿತ್ತು. ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯುವ ಮೂಲಕ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಡಿಸಿಸಿ ಬ್ಯಾಂಕ್ ಆಡಳಿತವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ.

ADVERTISEMENT

ಒಟ್ಟು 14 ನಿರ್ದೇಶಕರ ಸ್ಥಾನಗಳಲ್ಲಿ 8 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿತ್ತು. ಗುಬ್ಬಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ಕುಣಿಗಲ್ ತಾಲ್ಲೂಕಿನಲ್ಲಿ (ಎ–ವರ್ಗ) ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಎದುರಾಗಿತ್ತು. ಅವಿರೋಧವಾಗಿ ಆಯ್ಕೆಯಾದ 8 ಹಾಗೂ ಚುನಾವಣೆ ನಡೆದ 6 ಕ್ಷೇತ್ರಗಳಲ್ಲೂ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವಲ್ಲಿ ರಾಜಣ್ಣ ಯಶಸ್ವಿಯಾಗಿದ್ದರು.

ತುಮುಲ್ ಚುನಾವಣೆ ನಂತರ ರಾಜಣ್ಣ ವಿರುದ್ಧ ತೊಡೆ ತಟ್ಟಿರುವ ಸ್ವಪಕ್ಷದ ಶಾಸಕ ಎಸ್.ಆರ್.ಶ್ರೀನಿವಾಸ್, ಗುಬ್ಬಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು. ಶ್ರೀನಿವಾಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಎಂ.ಎಸ್.ಚನ್ನಮಲ್ಲಿಕಾರ್ಜುನ ಅವರಿಗೆ ಒಂದು ಮತವನ್ನೂ ಕೊಡಿಸಲು ಸಾಧ್ಯವಾಗಿರಲಿಲ್ಲ. ತೊಡೆ ತಟ್ಟಿದ್ದ ಶ್ರೀನಿವಾಸ್ ಅವರಿಗೆ ರಾಜಣ್ಣ ಬಲವಾದ ಪೆಟ್ಟು ನೀಡಿದ್ದರು. ಎಲ್ಲ 14 ನಿರ್ದೇಶಕರನ್ನೂ ತಮ್ಮ ಬೆಂಬಲಿಗರನ್ನೇ ಗೆಲ್ಲಿಸಿಕೊಂಡು, ಅಧ್ಯಕ್ಷ ಸ್ಥಾನದ ದಾರಿಯನ್ನು ಸುಗಮ ಮಾಡಿಕೊಂಡಿದ್ದರು.

ಅಧ್ಯಕ್ಷರಾಗಿ ರಾಜಣ್ಣ ಆಯ್ಕೆ ಆಗುತ್ತಿದ್ದಂತೆ ಡಿಸಿಸಿ ಬ್ಯಾಂಕ್ ಆವರಣದ ಹೊರ ಭಾಗದಲ್ಲಿ ನೆರೆದಿದ್ದ ಅವರ ಬೆಂಬಲಿಗರು ಘೋಷಣೆ ಮೊಳಗಿಸಿದರು. ನಂತರ ಅಭಿಮಾನಿಗಳು, ಸಹಕಾರಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆ ಸಲುವಾಗಿ ಡಿಸಿಸಿ ಬ್ಯಾಂಕ್ ಮುಂಭಾಗದ ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.