ತುಮಕೂರು: ಹೆರಿಗೆ ಮಾಡಿಸಲು ಲಂಚ ಪಡೆದಿದ್ದ ಜಿಲ್ಲಾ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದ ಡಾ.ಸಿ.ಎನ್.ಮಹಾಲಕ್ಷ್ಮಮ್ಮ ಎಂಬಾಕೆಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ.
ನಗರದ ಕೋತಿತೋಪು ನಿವಾಸಿಯಾದ ಜಿ.ಟಿ.ಮುಕುಂದ ಎಂಬುವರು ತಮ್ಮ ನಾದಿನಿ ಸವಿತಾ ಅವರನ್ನು ಹೆರಿಗೆ ಸಲುವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆ ಮಾಡಿಸಲು ಡಾ.ಸಿ.ಎನ್.ಮಹಾಲಕ್ಷ್ಮಮ್ಮ ₹3 ಸಾವಿರ ಲಂಚಕ್ಕೆ ಒತ್ತಾಯಿಸಿದ್ದರು. ಲಂಚ ಕೊಡಲು ಇಷ್ಟವಿಲ್ಲದಿದ್ದರೂ ತಾಯಿ, ಮಗುವಿನ ಆರೋಗ್ಯದ ದೃಷ್ಟಿಯಿಂದ 2021 ಫೆಬ್ರುವರಿ 2ರಂದು ₹2 ಸಾವಿರ ಲಂಚ ಕೊಟ್ಟಿದ್ದರು.
ಆಸ್ಪತ್ರೆ ಡಿ ಗ್ರೂಪ್ ಸೌಕರ ಬರಕತ್ ಅಲಿ ಅವರಿಗೆ ಲಂಚದ ಹಣ ಕೊಡಿಸಿ, ಅವರಿಂದ ಸಿ.ಎನ್.ಮಹಾಲಕ್ಷ್ಮಮ್ಮ ಪಡೆದುಕೊಂಡಿದ್ದರು. ಈ ಬಗ್ಗೆ 2021 ಫೆ. 4ರಂದು ಲೋಕಾಯುಕ್ತ ಪೊಲೀಸರಿಗೆ ಮುಕುಂದ ದೂರು ನೀಡಿದ್ದರು. ತನಿಖೆ ನಡೆಸಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಎನ್.ವಿರೇಂದ್ರ, ಜಿ.ಮಂಜುನಾಥ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮಿನ ಪರವಿನ ಲಾಡಖಾನ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎನ್.ಬಸವರಾಜು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.