
ತುಮಕೂರು: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಇ-ಸ್ವತ್ತು ದಾಖಲೆಗಳನ್ನು ನೀಡುವಲ್ಲಿ ವಿಳಂಬ ಹಾಗೂ ಪಾಲಿಕೆ ಆಡಳಿತದ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಇ–ಸ್ವತ್ತು ದಾಖಲೆ ಸಿದ್ಧಪಡಿಸುವಲ್ಲಿ ವಿಳಂಬ, ಹಣಕ್ಕೆ ಬೇಡಿಕೆ, ಸಾರ್ವಜನಿಕರ ಕೆಲಸ ಮಾಡಿಕೊಡದಿರುವ ಬಗ್ಗೆ ಜನರಿಂದ ದೂರು ಬಂದಿದ್ದರಿಂದ ಭೇಟಿ ನೀಡಿದ್ದರು. ಅಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ ಕಂಡು ಒಂದು ಕ್ಷಣ ಅವಕ್ಕಾದರು. ಹಳಿ ತಪ್ಪಿದ ಪಾಲಿಕೆ ಆಡಳಿತ ನೋಡಿ ದಂಗಾದರು.
ಪಾಲಿಕೆಯ ಆಸ್ತಿ ದಾಖಲಾತಿ ವಿಭಾಗದಲ್ಲಿ ಆನ್‍ಲೈನ್ ಮೂಲಕ ಸಲ್ಲಿಕೆಯಾದ ಹಲವು ಅರ್ಜಿಗಳು ಕಂದಾಯ ನಿರೀಕ್ಷಕರ ಹಂತದಲ್ಲೇ ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿರುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂತು. ದಾಖಲೆಗಳ ಪರಿಶೀಲನೆಗೆ ತಿಂಗಳುಗಟ್ಟಲೆ ಕಾಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಸಾರ್ವಜನಿಕರು ಗಮನಕ್ಕೆ ತಂದರು. ಕೆಲ ಕಡೆಗಳಲ್ಲಿ ಅಧಿಕಾರಿಗಳ ಅಸಮರ್ಪಕ ಸೇವೆ ಪಾಲಿಕೆ ವಸ್ತುಸ್ಥಿತಿಯನ್ನು ತೆರೆದಿಟ್ಟಿತು. ಈ ಸಂಬಂಧ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಸಲ್ಲಿಸಿದ ಅಂಕಿ-ಅಂಶಗಳ ಪ್ರಕಾರ ನೂರಾರು ಇ-ಸ್ವತ್ತು ಅರ್ಜಿಗಳು ಕಂದಾಯ ನಿರೀಕ್ಷಕರ ಮಟ್ಟದಲ್ಲಿ ಬಾಕಿ ಉಳಿದಿದ್ದು, ಸಾರ್ವಜನಿಕರು ಸಮಯಕ್ಕೆ ದಾಖಲೆಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜನರನ್ನು ದಿನಗಟ್ಟಲೆ ಕಚೇರಿಯ ಸುತ್ತ ಸುತ್ತಿಸುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸಬೇಕು. ತಮ್ಮ ವರ್ತನೆ ಇದೇ ರೀತಿ ಮುಂದುವರಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.