ADVERTISEMENT

ತುಮಕೂರು: ಸ್ಮಶಾನಕ್ಕಿಲ್ಲ ಜಾಗ; ಕೆರೆಯಂಗಳದಲ್ಲೇ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:20 IST
Last Updated 16 ಏಪ್ರಿಲ್ 2025, 7:20 IST
ತುಮಕೂರು ಹೊರವಲಯದ ಸತ್ಯಮಂಗಲ ಕೆರೆಯಲ್ಲಿ ತ್ಯಾಜ್ಯ ತುಂಬಿರುವುದು
ತುಮಕೂರು ಹೊರವಲಯದ ಸತ್ಯಮಂಗಲ ಕೆರೆಯಲ್ಲಿ ತ್ಯಾಜ್ಯ ತುಂಬಿರುವುದು   

ತುಮಕೂರು: ಸುಸಜ್ಜಿತ ಶಾಲೆ, ಅಂಗನವಾಡಿ, ನಮ್ಮ ಕ್ಲಿನಿಕ್‌ ಕಟ್ಟಡ, ರಸ್ತೆಗೆ ಡಾಂಬಾರು, ದೇಗುಲ ಅಭಿವೃದ್ಧಿ... ಇಷ್ಟೆಲ್ಲ ಸೌಲಭ್ಯ ಕಲ್ಪಿಸಿರುವ ಊರಿಗೆ ಒಂದು ಸಾರ್ವಜನಿಕ ಸ್ಮಶಾನವಿಲ್ಲ.

ನಗರಕ್ಕೆ ಹೊಂದಿಕೊಂಡಂತೆ ಇರುವ ಸತ್ಯಮಂಗಲ ಪ್ರದೇಶದ ಜನರು ಕೆರೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ. ಈ ಪ್ರದೇಶಕ್ಕೆ ಒಂದು ಸಾರ್ವಜನಿಕ ಸ್ಮಶಾನ ಇಲ್ಲದೆ ಜನರು ಕೊನೆ ಗಳಿಗೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ. ಕೆರೆ ದಡದಲ್ಲಿ, ನೀರಿಲ್ಲದ ಕಡೆ ಹೆಣ ಹೂಳುತ್ತಿದ್ದಾರೆ. ನಗರದ ಕೂಗಳತೆಯ ದೂರದಲ್ಲಿರುವ ಮಹಾನಗರ ಪಾಲಿಕೆಯ 23ನೇ ವಾರ್ಡ್‌ ವ್ಯಾಪ್ತಿಗೆ ಒಳಪಡುವ ಪ್ರದೇಶದ ಜನರ ಪಾಡು ಹೇಳತೀರದಾಗಿದೆ.

ಸತ್ಯಮಂಗಲ, ಸತ್ಯಮಂಗಲ ಪಾಳ್ಯ, ನವಿಲೆಹಳ್ಳಿ, ಜಗನ್ನಾಥಪುರ, ಅಣೆತೋಟ, ಅಗ್ನಿಬನ್ನಿರಾಯ ನಗರ, ಭಾಗ್ಯ ನಗರ, ಜ್ಯೋತಿಪುರ, ಸಾಯಿ ಲೇ–ಔಟ್‌ ಪ್ರದೇಶಗಳು ವಾರ್ಡ್‌ ವ್ಯಾಪ್ತಿಗೆ ಒಳಪಡುತ್ತವೆ. ಬಹುತೇಕ ಕಡೆ ಸ್ಮಶಾನದ್ದೇ ಸಮಸ್ಯೆಯಾಗಿದೆ. ಎಲ್ಲ ಕಡೆ ಮುಖ್ಯರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಚರಂಡಿ ಸಂಪರ್ಕ ಸರಿಯಾಗಿಲ್ಲ. ಯಾವುದೇ ಒಂದು ಕಡೆಯೂ ನೀರು ಸರಾಗವಾಗಿ ಹರಿಯುತ್ತಿಲ್ಲ.

ADVERTISEMENT

ಬೆಳಗುಂಬ ರಸ್ತೆಗೆ ಹೊಂದಿಕೊಂಡಂತೆ ಇರುವ ಜ್ಯೋತಿಪುರ, ಅಣೆತೋಟ ಭಾಗದಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಮಳೆ ಬಂದರೆ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕ್ಲಿನಿಕ್‌ನಲ್ಲಿ ಮಾತ್ರೆ ಇಲ್ಲ: ಈ ಹಿಂದೆ ಸತ್ಯಮಂಗಲದ ಜನರು ಸಣ್ಣ–ಪುಟ್ಟ ಕಾಯಿಲೆ ಬಂದರೂ ಜಿಲ್ಲಾ ಆಸ್ಪತ್ರೆಗೆ ಓಡಿ ಬರಬೇಕಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಇಲ್ಲಿಯೇ ನಮ್ಮ ಕ್ಲಿನಿಕ್‌ ಆರಂಭಿಸಲಾಯಿತು. ಇನ್ನೇನು ನಮ್ಮೂರಿನಲ್ಲಿಯೇ ಆಸ್ಪತ್ರೆ ಶುರುವಾಗಿದೆ. ದೊಡ್ಡಾಸ್ಪತ್ರೆಗೆ ಹೋಗುವ ಖರ್ಚು ತಪ್ಪುತ್ತದೆ ಎಂದು ಭಾವಿಸಿದ್ದ ಜನರಿಗೆ ದಿನ ಕಳೆದಂತೆ ನಿರಾಸೆ ಎದುರಾಗಿದೆ.

‘ಇದೀಗ ನಮ್ಮ ಕ್ಲಿನಿಕ್‌ನಲ್ಲಿ ಮಾತ್ರೆಗಳೇ ಸರಿಯಾಗಿ ಸಿಗುತ್ತಿಲ್ಲ. ಕೆಲವೊಮ್ಮೆ ವೈದ್ಯರೇ ಇರಲ್ಲ. ಸುಮ್ಮನೆ ಹೆಸರಿಗಷ್ಟೇ ಕ್ಲಿನಿಕ್‌ ಇದೆ. ಅದರಿಂದ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ಸತ್ಯಮಂಗಲದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಸತ್ಯಮಂಗಲ ಮುಖ್ಯರಸ್ತೆ ಹಾಳಾಗಿರುವುದು

‘ಸಂಜೆಯ ನಂತರ ಮಹಿಳೆಯರು ಮುಕ್ತವಾಗಿ ಓಡಾಡಲು ಆಗುತ್ತಿಲ್ಲ. ವಾಯು ವಿಹಾರ ಮಾಡುವವರ ಸರ ಕಿತ್ತುಕೊಂಡು ಹೋದ ಉದಾಹರಣೆಗಳು ಸಾಕಷ್ಟಿವೆ. ಪೊಲೀಸ್‌ ಬೀಟ್‌ ಹೆಚ್ಚಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಜನ ವಸತಿ ಪ್ರದೇಶದ ಪಕ್ಕದಲ್ಲಿಯೇ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿವೆ. ಅವು ಹೊರ ಸೂಸುವ ಹೊಗೆಯಿಂದ ಜನ ಉಸಿರಾಡಲು ಆಗುತ್ತಿಲ್ಲ. ಕಾರ್ಖಾನೆ ಮುಚ್ಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಇಲ್ಲಿಯ ತನಕ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ’ ಎಂದು ಸತ್ಯಮಂಗಲದ ಹಿರಿಯರೊಬ್ಬರು ಬೇಸರದಲ್ಲಿಯೇ ಮಾತನಾಡಿದರು.

ಸತ್ಯಮಂಗಲ ಮುಖ್ಯರಸ್ತೆಯ ಚರಂಡಿ ಸ್ಥಿತಿ
ಸತ್ಯಮಂಗಲದ ಹಲವು ಕಡೆಗಳಲ್ಲಿ ರಸ್ತೆ ಸರಿಯಾಗಿಲ್ಲ. ಇಂದಿಗೂ ಮಣ್ಣು ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಊರಿನಲ್ಲಿ ಎಲ್ಲ ಕಡೆ ಕಾಂಕ್ರಿಟ್‌ ಹಾಕಿದ್ದಾರೆ. ಊರಿನ ಹೊರವಲಯದ ರಸ್ತೆಗಳು ಅಧ್ವಾನ ಆಗಿವೆ.
ನಂಜಪ್ಪ ಸತ್ಯಮಂಗಲ
ಈ ಪ್ರದೇಶದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಮಾಯವಾಗಿದೆ. ಎಲ್ಲೆಂದರಲ್ಲಿ ಕಸ ಸುರಿದರೂ ಕೇಳುವವರು ಇಲ್ಲ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಕಸ ಸಂಗ್ರಹ ವಾಹನವೂ ಪ್ರತಿ ದಿನ ಬರುವುದಿಲ್ಲ.
ಚಂದ್ರಶೇಖರಯ್ಯ ಸತ್ಯಮಂಗಲ
ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಈಗ ದುಪ್ಪಟ್ಟಾಗಿದೆ. ಮಕ್ಕಳನ್ನು ಕಚ್ಚಲು ಬರುತ್ತವೆ. ಗ್ರಾಮದ ದೇವಸ್ಥಾನಕ್ಕೆ ಹೋಗಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಅಧಿಕಾರಿಗಳಿಗೆ ಒತ್ತಾಯಿಸಿದರೂ ಯಾರೊಬ್ಬರೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ.
ಸತ್ಯನಾರಾಯಣಾಚಾರ್‌ ಸತ್ಯಮಂಗಲ ಪಾಳ್ಯ
ಗ್ರಾಮದ ಯಾವ ಮನೆಗೂ ಚರಂಡಿ ಸರಿಯಾಗಿಲ್ಲ. ಅರ್ಧಂಬರ್ಧ ಕಾಮಗಾರಿಗಳು ನಡೆದಿವೆ. ಮಳೆ ಬಂದರೆ ಪ್ರತಿ ಮನೆ ಮುಂಭಾಗದಲ್ಲಿಯೇ ಕಲುಷಿತ ನೀರು ತುಂಬುತ್ತದೆ. ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಎಸ್.ಕೆ.ಸುಶೀಲಮ್ಮ ಸತ್ಯಮಂಗಲ ಪಾಳ್ಯ
ಎಲ್ಲ ಪ್ರದೇಶಗಳು ನಗರ ಹೊರವಲಯದಲ್ಲಿವೆ. ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಾಲೆ–ಅಂಗನವಾಡಿ ದುರಸ್ತಿ ಪಡಿಸಲಾಗಿದೆ. ಶಿಕ್ಷಣ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ಕೊಡಲಾಗಿದೆ.
ಟಿ.ಕೆ.ನರಸಿಂಹಮೂರ್ತಿ ಮಾಜಿ ಸದಸ್ಯ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.