ತುಮಕೂರಿನಲ್ಲಿ ಬುಧವಾರ ಹಾಲಪ್ಪ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ನಮ್ಮ ಕನಸು, ನಮ್ಮ ತುಮಕೂರು’ ಶೃಂಗ ಸಭೆಯಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಜತೆ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್ ಹಾಲಪ್ಪ ಮಾತುಕತೆ ನಡೆಸಿದರು.
ತುಮಕೂರು: ‘ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಹೋಬಳಿ ಮಟ್ಟದಲ್ಲಿ ವೃತ್ತಿಪರ ಕೋರ್ಸ್ ಆರಂಭಿಸಬೇಕು’ ಎಂದು ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಹಾಲಪ್ಪ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ನಮ್ಮ ಕನಸು, ನಮ್ಮ ತುಮಕೂರು’ ಶೃಂಗ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ನಗರಗಳ ಮೇಲಿನ ವ್ಯಾಮೋಹ ಕಡಿಮೆ ಆಗಬೇಕಿದೆ. ಹಳ್ಳಿ, ಹಳ್ಳಿತನ ಉಳಿಸುವ ಪ್ರಯತ್ನ ಆಗಬೇಕು. ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಬೇಕು. ಗೋಮಾಳದಲ್ಲಿ ಗಿಡ ನೆಟ್ಟು ಪೋಷಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.
ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸ್ವರಸ್ವತಿ, ‘ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಹಾಸ್ಟಲ್‍ಗಳಿವೆ. ಅವುಗಳಲ್ಲಿ ಶೌಚಾಲಯ, ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ನಲುಗುತ್ತಿವೆ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ. ಯುವ ಸಮೂಹ ಕಾನೂನಿಗೆ ಬೆಲೆ ನೀಡುತ್ತಿಲ್ಲ. ಹೆಲ್ಮೆಟ್ ಬಳಸದೆ ವಾಹನ ಚಲಾಯಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ, ‘ದೀಪದ ಕೆಳಗೆ ಕತ್ತಲು ಎಂಬಂತೆ, ಎಲ್ಲವೂ ಇದ್ದರೂ ಜಿಲ್ಲೆಗೆ ಏನೂ ಸಿಗುತ್ತಿಲ್ಲ. ಜಯದೇವ ಕ್ಯಾನ್ಸರ್ ಆಸ್ಪತ್ರೆಗೆ ಜಾಗ ನೀಡಿದರೆ ಆಸ್ಪತ್ರೆ ನಿರ್ಮಿಸಲಾಗುವುದು’ ಎಂದು ಹೇಳಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್ ಹಾಲಪ್ಪ, ‘ಕೃಷಿ, ಶಿಕ್ಷಣ, ಮಹಿಳಾ ಸಬಲೀಕರಣ, ಯುವ ಜನರಿಗಾಗಿ ವಿಶೇಷ ಯೋಜನೆ ಬಗ್ಗೆ ಮಠಾಧೀಶರು ನೀಡುವ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಜಾರಿಗೊಳಿಸಲು ಶೃಂಗಸಭೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ತಿಪಟೂರಿನ ಗುರುಕುಲಾನಂದ ಮಠದ ಕರಿಬಸವ ಸ್ವಾಮೀಜಿ, ಡಿ.ಎಂ.ಪಾಳ್ಯದ ರೇವಣ್ಣ ಸಿದ್ದೇಶ್ವರ ಶಾಖಾ ಮಠದ ಬಿಂದುಶೇಖರ್ ಒಡೆಯರ್, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ, ಹಿರೇಮಠದ ರೇವಣ ಸಿದ್ದೇಶ್ವರ ಸ್ವಾಮೀಜಿ, ಸರಪಳಿ ಮಠದ ಜ್ಞಾನಾನಂದಪುರಿ ಸ್ವಾಮೀಜಿ, ತೊರೆಮಠದ ಅಟವಿ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ನಿಟ್ಟರಹಳ್ಳಿ ನೀಲಕಂಠೇಶ್ವರಾಚಾರ್ಯ ಸ್ವಾಮೀಜಿ ಇತರರು ಭಾಗವಹಿಸಿದ್ದರು.
‘ಜಿಲ್ಲೆಗೆ ಗಟ್ಟಿ ನಾಯಕತ್ವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮುಖ್ಯಮಂತ್ರಿಯಾದರೆ ಅಭಿವೃದ್ಧಿ ಸಾಧ್ಯ’ ಎಂದು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಚ್ಛಾಶಕ್ತಿ ಇರುವ ರಾಜಕಾರಣಿ ಅಗತ್ಯವಿದೆ. ಜಿ.ಪರಮೇಶ್ವರ ಮುಖ್ಯಮಂತ್ರಿ ಆದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದು ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದರು. ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ‘ಪರಮೇಶ್ವರ ಮುಖ್ಯಮಂತ್ರಿಯಾದರೆ ಜಿಲ್ಲೆಗೆ ಅನುದಾನ ಹರಿದು ಬರಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.