ADVERTISEMENT

ತುಮಕೂರು | 12 ಗಂಟೆ ಕೆಲಸ: ಕಾರ್ಮಿಕರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 6:44 IST
Last Updated 25 ಜೂನ್ 2025, 6:44 IST
ತುಮಕೂರು ಕಾರ್ಮಿಕ ಅಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಕೆಲಸದ ಅವಧಿ ಹೆಚ್ಚಳ ವಿರೋಧಿಸಿ, ₹35 ಸಾವಿರ ಸಂಬಳ ನಿಗದಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು
ತುಮಕೂರು ಕಾರ್ಮಿಕ ಅಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಕೆಲಸದ ಅವಧಿ ಹೆಚ್ಚಳ ವಿರೋಧಿಸಿ, ₹35 ಸಾವಿರ ಸಂಬಳ ನಿಗದಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ತುಮಕೂರು: ಕೆಲಸದ ಅವಧಿ ಹೆಚ್ಚಳ ವಿರೋಧಿಸಿ, ₹35 ಸಾವಿರ ಸಂಬಳ ನಿಗದಿಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

‘ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆ ಜಾರಿಗೆ ತರಲು ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ. ಇದು ಸಾಲದೆಂಬಂತೆ ಕೆಲಸದ ಅವಧಿ ದಿನಕ್ಕೆ 12 ಗಂಟೆಗಳ ಕಾಲ ವಿಸ್ತರಿಸಲು ಮುಂದಾಗಿದೆ. ಕಾರ್ಮಿಕರನ್ನು ಬೆದರಿಸಿ 12 ಗಂಟೆಗೆ ಒಪ್ಪಿಗೆ ಪಡೆಯಲಾಗುತ್ತಿದೆ. ಒಪ್ಪಿಗೆ ನೀಡದ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಬೆದರಿಕೆ ಹಾಕಲಾಗುತ್ತಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಆರೋಪಿಸಿದರು.

ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೇಶ್‌, ‘ಸರ್ಕಾರದಿಂದ ಅನುಮತಿ ಪಡೆಯದೆ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಲು, ಕಾರ್ಖಾನೆ ಮುಚ್ಚಲು ಮಾಲೀಕರಿಗೆ ಅವಕಾಶ ನೀಡುವ ತಿದ್ದುಪಡಿ ಮಸೂದೆ ಸಿದ್ಧಪಡಿಸಲಾಗಿದೆ. ಕಾಯಂ ಸ್ವರೂಪದ ಕೆಲಸಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರನ್ನು ನಿಯೋಜಿಸಲು ಮಾಲೀಕರಿಗೆ ಅವಕಾಶ ನೀಡಲಾಗಿದೆ. ಇದು ಕಾರ್ಮಿಕರ ಬದುಕಿಗೆ ಮಾರಕವಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಾರ್ಮಿಕ ಅಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾರ್ಮಿಕ ಅಧಿಕಾರಿ ಅಹವಾಲು ಆಲಿಸಬೇಕು, ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸುಮಾರು ಎರಡು ಗಂಟೆ ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎನ್.ಕೆ.ಸುಬ್ರಮಣ್ಯ, ಸುಜಿತ್‌ ನಾಯಕ್, ರಂಗಧಾಮಯ್ಯ, ಮಾರುತಿ, ಪ್ರಕಾಶ್‌, ಪಾರ್ವತಮ್ಮ, ನಾಗರತ್ನ, ನಟರಾಜು, ಟಿ.ಆರ್‌.ಕಲ್ಪನಾ, ಇಬ್ರಾಹಿಂ ಖಲೀಲ್‌, ಟಿ.ಜಿ.ಶಿವಲಿಂಗಯ್ಯ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.