ADVERTISEMENT

ತುಮಕೂರು| ತಾತ್ಕಾಲಿಕ ಬಸ್ ನಿಲ್ದಾಣದೊಂದಿಗೆ ಸಹಕರಿಸಿ: ಜಿ.ಬಿ.ಜ್ಯೋತಿಗಣೇಶ್ ಮನವಿ

ಹೈಟೆಕ್‌ಗೊಳ್ಳಲಿದೆ ಹಾಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:56 IST
Last Updated 8 ಜನವರಿ 2020, 13:56 IST
ತುಮಕೂರಿನ ಹಾಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ನಿಗಮದ ಘಟಕ-1ರ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಶಾಸಕ ಜ್ಯೋತಿಗಣೇಶ್ ಬುಧವಾರ ಚಾಲನೆ ನೀಡಿದರು.
ತುಮಕೂರಿನ ಹಾಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ನಿಗಮದ ಘಟಕ-1ರ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಶಾಸಕ ಜ್ಯೋತಿಗಣೇಶ್ ಬುಧವಾರ ಚಾಲನೆ ನೀಡಿದರು.   

ತುಮಕೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‍ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಹೈಟೆಕ್‌ಗೊಳಿಸುವ ಹಿನ್ನೆಲೆಯಲ್ಲಿ ಹಾಲಿ ಇರುವ ಬಸ್‍ ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ತುಮಕೂರು ಘಟಕ-1ರ ಸ್ಥಳಕ್ಕೆ ಬುಧವಾರ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಯಿತು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಸ್ ನಿಲ್ದಾಣಕ್ಕೆ ಚಾಲನೆ ನೀಡಿ ಮಾತನಾಡಿ, ‘ಸಾರ್ವಜನಿಕರು ಸ್ಥಳಾಂತರಗೊಂಡಿರುವ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನಗರದ ಅಶೋಕ ರಸ್ತೆಯಲ್ಲಿರುವ ಹಳೆಯ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಭಾಗದಲ್ಲಿ ನೂತನ ಅತ್ಯಾಧುನಿಕ ಬಸ್‍ ನಿಲ್ದಾಣ ನಿರ್ಮಿಸಲು ಸುಮಾರು ₹82 ಕೋಟಿಯ ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸಲಾಗಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ADVERTISEMENT

ತಾತ್ಕಾಲಿಕ ಬಸ್ ನಿಲ್ದಾಣದ ಸ್ಥಳಾಂತರದ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಪತ್ರಿಕೆಗಳ ಮೂಲಕ ತಿಳಿಸಲಾಗಿದ್ದು, ಆದಾಗ್ಯೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಬುಧವಾರ ಅನೌಪಚಾರಿಕವಾಗಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ತುಮಕೂರು ಘಟಕದಿಂದ ತುಮಕೂರು-ತಿರುಪತಿ, ತುಮಕೂರು-ಮಧುರೈ, ತುಮಕೂರು-ತಿಪಟೂರು, ಹೊಸದುರ್ಗ-ಬೆಂಗಳೂರು ಮಾರ್ಗವಾಗಿ ಚಲಿಸುವ 4 ಹೊಸ ಬಸ್‍ಗಳನ್ನು ಕೂಡ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.

ತಾತ್ಕಾಲಿಕ ಬಸ್ ನಿಲ್ದಾಣದಿಂದ ಹೊರಡುವ ವಾಹನಗಳ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ವಾಹನ ಸಂಚಾರದಲ್ಲಿ ಕೂಡ ಬದಲಾವಣೆ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು

ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಲಲಿತಾ ರವೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧಿಕಾರಿಗಳು, ಕೆಎಸ್‍ಆರ್‌ಟಿಸಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.