ತುಮಕೂರು: ಜಾತಿವಾರು ಸಮೀಕ್ಷೆ ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟಿದ್ದರೂ ಜಿಲ್ಲೆಯಲ್ಲಿ ಮಾತ್ರ ಮುಂದೆ ಸಾಗುತ್ತಿಲ್ಲ. ಇತರ ಜಿಲ್ಲೆಗಳಿಗಿಂತ ಸಾಕಷ್ಟು ಹಿಂದೆ ಉಳಿದಿದ್ದು, ಆಮೆ ವೇಗದಲ್ಲಿ ನಡೆಯುತ್ತಿದೆ.
ತಾಂತ್ರಿಕ ಸಮಸ್ಯೆ ಶುಕ್ರವಾರ ಸಹ ಮುಂದುವರಿದಿದ್ದು, ಸಮೀಕ್ಷೆಗೆ ತೆರಳಿದ್ದ ಶಿಕ್ಷಕರು ಕೆಲವು ಕಡೆಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಒಂದೂ ಮನೆಯ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಸಮೀಕ್ಷೆ ಮಾಡಲೇಬೇಕು ಎಂದು ಶಿಕ್ಷಕರ ಮೇಲೆ ಅಧಿಕಾರಿಗಳು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ ಸಮೀಕ್ಷೆ ಸಾಧ್ಯವಾಗದೆ ಸಾಕಷ್ಟು ಮಂದಿ ಕೈಚಲ್ಲಿ, ಅಸಹಾಯಕರಾಗಿ ಕುಳಿತಿದ್ದಾರೆ.
‘ಮೊದಲು ತಾಂತ್ರಿಕ ಸಮಸ್ಯೆ ಬಗೆಹರಿಸಿ. ನಂತರ ಸಮೀಕ್ಷೆ ಮಾಡುವಂತೆ ಹೇಳಿ. ಆಗ ಕೆಲಸ ಮಾಡುತ್ತೇವೆ. ಸಮಸ್ಯೆ ಇದ್ದರೂ ಸುಮ್ಮನೆ ಸಮೀಕ್ಷೆ ಮಾಡಿ ಎಂದರೆ ಹೇಗೆ? ಬೆಳಿಗ್ಗೆಯಿಂದ ಸಂಜೆ ವರೆಗೂ ಪ್ರಯತ್ನಿಸಿದರೂ ಒಂದು ಕುಟುಂಬದ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿ ನೋಟಿಸ್ ಕೊಡಲು ಮುಂದಾಗಿದ್ದಾರೆ. ಇದು ಯಾವ ರೀತಿಯ ನ್ಯಾಯ’ ಎಂದು ಸಾಕಷ್ಟು ಶಿಕ್ಷಕರು ‘ಪ್ರಜಾವಾಣಿ’ ಕಚೇರಿಗೆ ದೂರವಾಣಿ ಕರೆ ಮಾಡಿ ಆಕ್ರೋಶ ಹೊರ ಹಾಕಿದರು.
ಪ್ರಮುಖವಾಗಿ ಆ್ಯಪ್, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಮೀಕ್ಷೆ ಸಾಧ್ಯವಾಗುತ್ತಿಲ್ಲ. ಪ್ರತಿ ದಿನವೂ ಅಪ್‌ಡೇಟ್ ಮಾಡಿದ ಆ್ಯಪ್ ನೀಡುತ್ತಿದ್ದು, ಯಾವುದನ್ನು ಬಳಸಬೇಕು ಎಂಬುದು ಸಾಕಷ್ಟು ಶಿಕ್ಷಕರಿಗೆ ತಿಳಿಯದಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು. ಸಮರ್ಪಕವಾಗಿ ತರಬೇತಿ ನೀಡದಿರುವುದು ಇಷ್ಟೆಲ್ಲ ಸಮಸ್ಯೆಗೆ ಮೂಲವಾಗಿದೆ.
ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಜತೆಗೆ ಒಟಿಪಿ ಸಮಸ್ಯೆಯೂ ಎದುರಾಗಿದೆ. ಸಾಕಷ್ಟು ಕುಟುಂಬಗಳಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಅಪ್‌ಡೇಟ್ ಆಗಿರುವುದಿಲ್ಲ. ಅದಕ್ಕೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿರುವುದಿಲ್ಲ. ಆಧಾರ್ ಕಾರ್ಡ್ ನೋಂದಣಿ ಸಮಯದಲ್ಲಿ ಯಾರದ್ದೋ ಒಂದು ಮೊಬೈಲ್ ಕೊಟ್ಟಿರುತ್ತಾರೆ. ಜಾತಿವಾರು ಸಮೀಕ್ಷೆ ಸಮಯದಲ್ಲಿ ಒಟಿಪಿ ಆ ಮೊಬೈಲ್‌ಗೆ ಹೋಗುತ್ತದೆ. ಅತ್ತ ಕಡೆಯಿಂದ ಒಟಿಪಿ ಸಿಗುವುದಿಲ್ಲ. ಅದಿಲ್ಲದೆ ಮುಂದಿನ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ಶಿಕ್ಷಕರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.
ತಾಂತ್ರಿಕವಾಗಿ ಕೌಶಲ, ಪರಿಣತಿ ಹೊಂದಿದ ಯುವ ಶಿಕ್ಷಕರು ಮೊಬೈಲ್ ಬಳಕೆ ಸಮಯದಲ್ಲಿ ಅಷ್ಟೊಂದು ಸಮಸ್ಯೆ ಎದುರಿಸುತ್ತಿಲ್ಲ. ನಿವೃತ್ತಿ ಅಂಚಿನಲ್ಲಿ ಇರುವವರು, ಮೊಬೈಲ್ ಬಳಕೆ ರೂಢಿಸಿಕೊಳ್ಳದವರು, ಇತ್ತೀಚಿನ ಅಪ್‌ಡೇಟ್ ಇರುವ ಮೊಬೈಲ್ ಹೊಂದದವರು ಸಮೀಕ್ಷೆಗೆ ಪರದಾಡುತ್ತಿದ್ದಾರೆ.
ಏನೆಲ್ಲ ಸಮಸ್ಯೆ
* ಬಹುತೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ
* ಕೆಲವು ಗ್ರಾಮಗಳಲ್ಲಿ ನೆಟ್‌ವರ್ಕ್ ಇಲ್ಲದೆ ಮೊಬೈಲ್ ಕಾರ್ಯ ನಿರ್ವಹಿಸುತ್ತಿಲ್ಲ
* ಸಾಕಷ್ಟು ಶಿಕ್ಷಕರಿಗೆ ಪರಿಚಯ ಇರುವ ಪ್ರದೇಶ ನೀಡಿಲ್ಲ
* ಪದೇಪದೇ ಆ್ಯಪ್ ಇನ್‌ಸ್ಟಾಲ್ ಮಾಡುವ ಸಮಯದಲ್ಲಿ ಮೊಬೈಲ್ ಹ್ಯಾಕ್ ಆಗುತ್ತಿದೆ
* ಯುಎಚ್ಐಡಿ ಕೆಲವು ಕಡೆ ಹಾಕಿಲ್ಲ. ಕೆಲವು ಹಾಕಿದ್ದರೂ ನಂಬರ್ ಬರೆದಿಲ್ಲ
* ಆ್ಯಪ್‌ನಲ್ಲಿ ಅನಗತ್ಯ ಪ್ರಶ್ನೆಗಳಿಗೆ ಉತ್ತರ ಕೇಳಿ ಭರ್ತಿ ಮಾಡಬೇಕಿದೆ
* ಕೋರ್ಟ್ ವ್ಯಾಜ್ಯ ಇರುವ ಬಗ್ಗೆಯೂ ಮಾಹಿತಿ ಕೇಳಲಾಗಿದೆ
ಸಮಸ್ಯೆ ಇಲ್ಲ
ಆ್ಯಪ್ ಅಪ್‌ಡೇಟ್ ಮಾಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಡೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಈರಪ್ಪ ಹೇಳಿದರು. ಜಿಲ್ಲೆಯಲ್ಲಿ ಶುಕ್ರವಾರದ ವರೆಗೆ 8758 ಸಮೀಕ್ಷೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕಾಗಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.