ತುಮಕೂರು: ಪ್ರತಿ ಬಾರಿಯೂ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಪಟ್ಟಿ ಹೊರ ಬಂದ ಸಮಯದಲ್ಲಿ ಅವಕಾಶಕ್ಕಾಗಿ ಕಾದು ಕುಳಿತಿದ್ದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಗೆ ಒಳಗಾಗುತ್ತಿದ್ದಾರೆ.
ಈಗ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶಿರಾ ತಾಲ್ಲೂಕಿನ ಹಾರೋಗೆರೆ ಮಹೇಶ್ ಅವರನ್ನು ನೇಮಕ ಮಾಡಲಾಗಿದೆ. ಅವರೊಬ್ಬರನ್ನು ಹೊರತುಪಡಿಸಿದರೆ ಜಿಲ್ಲೆಯ ಯಾವೊಬ್ಬ ಕಾರ್ಯಕರ್ತರಿಗೂ ಅವಕಾಶ ಸಿಗದಿರುವುದು ಬೇಸರಕ್ಕೆ ಕಾರಣವಾಗಿದೆ.
ಈ ಬಾರಿ ಸಿಗಬಹುದು, ಮುಂದಿನ ಸಲ ಅವಕಾಶ ಒದಗಿ ಬರಲಿದೆ ಎಂದು ಪ್ರತಿ ಬಾರಿಯೂ ನಿರೀಕ್ಷೆಯೊಂದಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದ್ದರೂ ಅಧಿಕಾರ ಸಿಗದೆ ಕಾರ್ಯಕರ್ತರು ಬಳಲಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ ನಿಗಮ, ಮಂಡಳಿ ಹಾಗೂ ಇತರ ಸರ್ಕಾರದ ಸಂಸ್ಥೆಗಳಲ್ಲಿ ಅಧಿಕಾರ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದವರು ಒಂದು ರೀತಿಯಲ್ಲಿ ಹತಾಶರಾಗಿದ್ದಾರೆ.
ಮೊದಲ ಹಂತದಲ್ಲಿ ನಿಗಮ, ಮಂಡಳಿಗೆ ನಡೆದ ನೇಮಕದ ಸಮಯದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈಗ ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡಲಾಗಿದೆ. ಜಿಲ್ಲೆಯ ಇಬ್ಬರಿಗೆ ಮಾತ್ರ ರಾಜ್ಯ ಮಟ್ಟದಲ್ಲಿ ಅವಕಾಶ ಸಿಕ್ಕಂತಾಗಿದೆ. ಉಳಿದಂತೆ ರಾಜ್ಯ ಮಟ್ಟದ ಯಾವ ನಿಗಮದಲ್ಲೂ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿಲ್ಲ. ಶ್ರೀನಿವಾಸ್ ಅವರನ್ನು 20 ತಿಂಗಳ ಅವಧಿಗೆ ನೇಮಕ ಮಾಡಿದ್ದು, ಅವರ ಅಧಿಕಾರ ಅವಧಿ ಮುಂದಿನ ಮಾರ್ಚ್ ವೇಳೆಗೆ ಮುಗಿಯಲಿದೆ.
ನಿಗಮಗಳಲ್ಲಿ ಅಧ್ಯಕ್ಷ ಸ್ಥಾನ ಸಿಗುವುದು ಹೋಗಲಿ, ನಿರ್ದೇಶಕರು, ನಾಮಿನಿ ಸದಸ್ಯರನ್ನಾಗಿ ನೇಮಿಸುವ ಕಡೆಗಳಲ್ಲೂ ಜಿಲ್ಲೆಯವರನ್ನು ಪರಿಗಣಿಸುತ್ತಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ಗೆ ಸದಸ್ಯರನ್ನು ನೇಮಿಸುವ ಸಮಯದಲ್ಲೂ ಜಿಲ್ಲೆಯವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಹೊರಗಿನವರನ್ನು ತಂದು ಪ್ರತಿಷ್ಠಾಪಿಸಲಾಯಿತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಖಾಲಿ ಉಳಿದಿದೆ. ಸ್ಥಳೀಯ ಮಟ್ಟದಲ್ಲಿ ಎಪಿಎಂಸಿ, ಹಾಪ್‌ಕಾಮ್ಸ್, ಜಿಲ್ಲಾ ಆಸ್ಪತ್ರೆ, ಬಂದಿಖಾನೆ ಸೇರಿದಂತೆ ಸರ್ಕಾರದ ಸಾಕಷ್ಟು ಸಂಸ್ಥೆಗಳಿಗೆ ನಾಮಿನಿ ಸದಸ್ಯರನ್ನು ನೇಮಿಸುವ ಅವಕಾಶಗಳಿವೆ. ಕನಿಷ್ಠ ಪಕ್ಷ ಅಂತಹುದಕ್ಕೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಈಗ ವಿವಿಧ ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಿದ್ದಾರೆ. ಇನ್ನೂ ನಿಗಮಗಳ ಅಧ್ಯಕ್ಷ ಸ್ಥಾನ ಜಿಲ್ಲೆಗೆ ಸಿಗುವುದಿಲ್ಲ. ಏನಿದ್ದರೂ ನಿರ್ದೇಶಕರು, ಸದಸ್ಯರನ್ನು ನೇಮಕ ಮಾಡುವ ಅವಕಾಶವಿದೆ. ಆ ಸಮಯದಲ್ಲಾದರೂ ಕಾರ್ಯಕರ್ತರನ್ನು ಗುರುತಿಸಬೇಕು. ಪಕ್ಷ ಬೆಳೆಸುವ ಪ್ರಯತ್ನವಾಗಬೇಕು’ ಎಂದು ಮುಖಂಡರೊಬ್ಬರು ಒತ್ತಾಯಿಸುತ್ತಾರೆ.
‘ಜಿಲ್ಲೆಯಲ್ಲಿ ಕೆಲವರು ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಡಿಸುತ್ತಿಲ್ಲ. ಪಕ್ಷದಲ್ಲಿ ನಾಯಕತ್ವವನ್ನೂ ಗಟ್ಟಿಗೊಳಿಸುತ್ತಿಲ್ಲ. ಎರಡು– ಮೂರನೇ ಹಂತದ ನಾಯಕರನ್ನೂ ಬೆಳೆಸುತ್ತಿಲ್ಲ. ಮುಂದಿನ ದಿನಗಳಲ್ಲಿ ಇದು ಪಕ್ಷಕ್ಕೆ ಹೆಚ್ಚು ಹಾನಿ ತರಲಿದೆ’ ಎಂದು ಮುಖಂಡರೊಬ್ಬರು ಬೇಸರ ತೋಡಿಕೊಂಡರು.
ಶಾಸಕರಿಗೆ ಅಧಿಕಾರ
ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಹೊರತುಪಡಿಸಿದರೆ ಜಿಲ್ಲೆಯಿಂದ ಆಯ್ಕೆ ಆಗಿರುವ ಶಾಸಕರು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚುವರಿಯಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಜಿ.ಪರಮೇಶ್ವರ ಸಚಿವರಾಗಿದ್ದರೆ ಕೆ.ಎನ್.ರಾಜಣ್ಣ ಸಚಿವರಾಗಿದ್ದರು. ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ತುಮುಲ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಮೂರು ಅಧಿಕಾರ ಒಬ್ಬರ ಬಳಿ ಇದೆ. ಟಿ.ಬಿ.ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿಸಿ (ಸಂಪುಟ ದರ್ಜೆ). ತಿಪಟೂರು ಶಾಸಕ ಕೆ.ಷಡಕ್ಷರಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ. ಆದರೆ ಕಾರ್ಯಕರ್ತರಿಗೆ ಮಾತ್ರ ಅವಕಾಶ ದೂರವೇ ಉಳಿದಿದೆ.
ಪಕ್ಷ ಗುರುತಿಸುತ್ತಿಲ್ಲ
‘ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಬೆವರು ಹರಿಸಿದ್ದೇವೆ. ಹಲವು ರೀತಿಯಲ್ಲಿ ದುಡಿದಿದ್ದೇವೆ. ಆದರೂ ನಮ್ಮನ್ನು ಗುರುತಿಸುತ್ತಿಲ್ಲ. ಯಾವ ರೀತಿಯಲ್ಲೂ ಅವಕಾಶಗಳು ಸಿಗುತ್ತಿಲ್ಲ. ಸುಮ್ಮನೆ ಇನ್ನೆಷ್ಟು ದಿನ ಕಾಯುತ್ತಾ ಕುಳಿತುಕೊಳ್ಳುವುದು. ವಿಧಾನಸಭೆ ಲೋಕಸಭೆ ಚುನಾವಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪಕ್ಷಕ್ಕೆ ಹೆಗಲು ಕೊಟ್ಟು ನಿಂತಿದ್ದೇವೆ. ದುಡಿಯುವ ಎತ್ತಿಗೆ ಮೇವು ನೀರು ಕೊಡದಿದ್ದರೆ ಹೇಗೆ’ ಎಂದು ಕಾರ್ಯಕರ್ತರೊಬ್ಬರು ನೋವಿನಿಂದಲೇ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.