ADVERTISEMENT

ತುಮಕೂರು: ಅಧಿಕಾರಿಗಳ ವಿರುದ್ಧ ಅಸಮಾಧಾನ– ಸಭೆ ಬಹಿಷ್ಕರಿಸಿದ ದಲಿತ ಮುಖಂಡರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 4:30 IST
Last Updated 1 ಜನವರಿ 2026, 4:30 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು   

ತುಮಕೂರು: ‘ಪರಿಶಿಷ್ಟರ ನೂರಾರು ವರ್ಷಗಳ ಸಮಸ್ಯೆ ಬಗೆಹರಿಯುತ್ತಿಲ್ಲ. ಓಡಾಡಲು ರಸ್ತೆ ಇಲ್ಲ, ಕಟಾವಿಗೆ ಬಂದ ರಾಗಿ ಹೊಲದಲ್ಲಿಯೇ ಉಳಿಯುತ್ತಿದೆ. ಕಚೇರಿಗೆ ಅಲೆದು ಚಪ್ಪಲಿ ಸವಿದಿದ್ದು ಬಿಟ್ಟರೆ ಯಾವುದೇ ಕೆಲಸ ಆಗುತ್ತಿಲ್ಲ’ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಆಕ್ರೋಶ ಹೊರ ಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಬಹಿಷ್ಕರಿಸಿ ಹೊರ ನಡೆದರು.

‘ಸಮಿತಿ ರಚನೆಯಾಗಿ ಒಂದು ವರ್ಷ ಕಳೆದಿದೆ. ಇದುವರೆಗೆ ನಾಲ್ಕು ಸಭೆ ನಡೆಸಲಾಗಿದೆ. ಒಂದು ಸಮಸ್ಯೆಗೂ ಪರಿಹಾರ ಒದಗಿಸಲು ಆಗಿಲ್ಲ. ಹೀಗಾದರೆ ಸಭೆ ನಡೆಸಿ ಏನು ಪ್ರಯೋಜನ’ ಎಂದು ಸಮಿತಿ ಸದಸ್ಯರಾದ ಕುಪ್ಪೂರು ಶ್ರೀಧರ್, ಕೋರ ರಾಜಣ್ಣ, ಪಾವಗಡ ರಾಮಾಂಜನಪ್ಪ, ದಲಿತ ನಾರಾಯಣ್‌ ಪ್ರಶ್ನೆ ಎತ್ತಿದರು. ಇದಕ್ಕೆ ಇತರೆ ಸದಸ್ಯರು ದನಿಗೂಡಿಸಿದರು.

ADVERTISEMENT

‘ಕ್ರಮ ವಹಿಸಲಾಗಿದೆ, ಸೂಚಿಸಲಾಗಿದೆ,‌ ನಿರ್ದೇಶಿಸಲಾಗಿದೆ’ ಎನ್ನುತ್ತಾರೆ.‌ ಯಾವೊಬ್ಬ ತಹಶೀಲ್ದಾರ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವರ್ಷದಲ್ಲಿ ಎಷ್ಟು ಸಮಸ್ಯೆ ಬಗೆಹರಿದಿದೆ ಎಂಬುವುದರ ಕುರಿತು ಆದೇಶ ಪ್ರತಿ ನೀಡಿದರೆ ಮಾತ್ರ ಸಭೆಯಲ್ಲಿ ಇರುತ್ತೇವೆ ಎಂದು ಪಟ್ಟು ಹಿಡಿದರು.

ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿ ವರ್ಷ ಹೆಚ್ಚುತ್ತಿವೆ. ಹಲ್ಲೆ ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ. ಹಿಂದಿನ ಸಭೆಗಳಲ್ಲಿ ಮಂಡನೆಯಾದ ವಿಚಾರಗಳ ಬಗ್ಗೆ ಚರ್ಚಿಸಿ, ಸಮಸ್ಯೆ ಕೊನೆಗಾಣಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗುತ್ತೇವೆ. ಅಲ್ಲಿಯೇ ನಮ್ಮ ಅಹವಾಲು ಹೇಳುತ್ತೇವೆ ಎಂದು ಎಚ್ಚರಿಸಿದರು.

ಸಮರ್ಪಕವಾಗಿ ಉತ್ತರಿಸದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ಹೊರ ಬಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಮುಖಂಡರ ಮನವೊಲಿಸಿದರು. ನಂತರ ಸಭೆ ನಡೆಯಿತು.

ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.