ADVERTISEMENT

ತುಮಕೂರು: ನಗರದಲ್ಲಿ ನಾಡಹಬ್ಬ ಸಂಭ್ರಮ

‘ತುಮಕೂರು ದಸರಾ’ದಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲೆ, ಭಕ್ತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:27 IST
Last Updated 8 ಅಕ್ಟೋಬರ್ 2019, 15:27 IST
ವಿಜಯದಶಮಿ ಮೆರವಣಿಗೆಯಲ್ಲಿದ್ದ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳು
ವಿಜಯದಶಮಿ ಮೆರವಣಿಗೆಯಲ್ಲಿದ್ದ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳು   

ತುಮಕೂರು: ವಿಜಯದಶಮಿಯ ಪ್ರಯುಕ್ತ ಆಯೋಜಿಸಿದ್ದ ‘ತುಮಕೂರು ದಸರಾ’ದಲ್ಲಿ ನಗರದಲ್ಲಿನ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ಮಂಗಳವಾರ ನಡೆಯಿತು.

ಟ್ರಾಕ್ಟರ್‌ಗಳನ್ನೆ ತರಹೇವಾರಿ ಹೂವುಗಳಿಂದ ಅಲಂಕರಿಸಿ, ಅದರಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಪುರಭವನ ಮುಂಭಾಗದಲ್ಲಿ ಮೆರವಣಿಗೆಗೆ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರು ಚಾಲನೆ ನೀಡಿದರು.

ದಾರಿಯ ಇಕ್ಕೆಲಗಳಲ್ಲಿ ನಿಂತು ಜನರು ಉತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಉತ್ಸವಮೂರ್ತಿಗಳಿಗೆ ಕೈ ಮುಗಿದು ಭಕ್ತಿಭಾವ ಮೆರೆದರು.

ADVERTISEMENT

ಮೆರವಣಿಗೆಯಲ್ಲಿದ್ದ ಕಲಾತಂಡಗಳು ಸೋಮನ ಕುಣಿತ, ಪಟ ಕುಣಿತ, ವೀರಗಾಸೆ, ನಾಸಿಕ್‌ ಡೋಲ್‌ ವಾದನವನ್ನು ಪ್ರಸ್ತುತಪಡಿಸಿದವು.

ಮೂರ್ತಿಗಳು ಜೂನಿಯರ್‌ ಕಾಲೇಜು ಮೈದಾನ ತಲುಪಿದ ಬಳಿಕ ತಾಲ್ಲೂಕು ದಂಡಾಧಿಕಾರಿ ಆರ್‌.ಯೋಗಾನಂದ ಅವರ ನೇತೃತ್ವದಲ್ಲಿ ಶಮೀ ಪೂಜೆಯನ್ನು ನೆರವೇರಿಸಲಾಯಿತು.

ಮೂಡಬಿದಿರೆಯ ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಗೆದ್ದವು. ಸಿಡಿಮದ್ದಿನ ಪ್ರದರ್ಶನವೂ ಆಕರ್ಷಕವಾಗಿತ್ತು. ಸಿದ್ದೇಂದ್ರಕುಮಾರ್‌ ಹಿರೇಮಠ ಮತ್ತು ವೃಂದದವರು ಭಕ್ತಿಸಂಗೀತ ಪ್ರಸ್ತುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.