ADVERTISEMENT

ತುಮಕೂರು: ₹132 ಕೋಟಿಯಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಡ; 300 ಹಾಸಿಗೆ ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 9 ಮೇ 2025, 13:59 IST
Last Updated 9 ಮೇ 2025, 13:59 IST
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನೂತನ ಕಟ್ಟಡದ ನೀಲನಕ್ಷೆಯನ್ನು ಸಚಿವ ಜಿ.ಪರಮೇಶ್ವರ ಪರಿಶೀಲಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್‌ಪಿ ಕೆ.ವಿ.ಅಶೋಕ, ಡಿಎಚ್‌ಒ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಉಪಸ್ಥಿತರಿದ್ದರು
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನೂತನ ಕಟ್ಟಡದ ನೀಲನಕ್ಷೆಯನ್ನು ಸಚಿವ ಜಿ.ಪರಮೇಶ್ವರ ಪರಿಶೀಲಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್‌ಪಿ ಕೆ.ವಿ.ಅಶೋಕ, ಡಿಎಚ್‌ಒ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಉಪಸ್ಥಿತರಿದ್ದರು   

ತುಮಕೂರು: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ₹132 ಕೋಟಿ ವೆಚ್ಚದಲ್ಲಿ 300 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿನೀಡಿ ನೂತನ ಕಟ್ಟಡದ ನೀಲನಕ್ಷೆ ಪರಿಶೀಲಿಸಿದರು. ನಂತರ ಅಧಿಕಾರಿಗಳ ಜೊತೆ ಚರ್ಚಿಸಿದರು.

ಈಗ ಇರುವ ಜಿಲ್ಲಾ ಆಸ್ಪತ್ರೆ ಕಟ್ಟಡ 78 ವರ್ಷ ಹಳೆಯದಾಗಿದ್ದು, ಆಧುನೀಕರಿಸಲು ಸಾಧ್ಯವಿಲ್ಲ. ಕಟ್ಟಡದ ಹಲವು ಭಾಗಗಳು ಶಿಥಿಲಗೊಂಡಿವೆ. ಹಳೆಯ ಕಟ್ಟಡದ ಮೇಲೆ ಮೇಲಂತಸ್ತುಗಳ ನಿರ್ಮಾಣ ಸಾಧ್ಯವಿಲ್ಲ. ಹಾಗಾಗಿ ಹೊಸದಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಗಣಿ ಬಾಧಿತ ಪ್ರದೇಶಗಳ ಸಮಗ್ರ ಪುನಶ್ಚೇತನಾ ಯೋಜನೆಯಡಿ ಅನುದಾನ ಬಳಸಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.

ADVERTISEMENT

ಕಟ್ಟಡ ಕಾಮಗಾರಿ ಕೈಗೊಳ್ಳುವ ಮುನ್ನ ಬೇರೆ ಜಿಲ್ಲೆಯಲ್ಲಿ ಆಧುನಿಕವಾಗಿ ನಿರ್ಮಿಸಿರುವ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿ+4 ಅಂತಸ್ತುಗಳ ಕಟ್ಟಡವನ್ನು ಆಧುನಿಕವಾಗಿ ವಿನ್ಯಾಸಗೊಳಿಸಬೇಕು. ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು ನವೀನ ಸೌಲಭ್ಯಗಳಿಂದ ಕೂಡಿದ ಕಟ್ಟಡದ ನಿರ್ಮಾಣ ಅಗತ್ಯವಾಗಿದೆ. ವಿನ್ಯಾಸದಲ್ಲಿ ಸುಲಭ ಪ್ರವೇಶ, ತುರ್ತು ಸೇವೆಗಳ ವೇಗ, ಸ್ವಚ್ಛತೆ, ಸ್ಮಾರ್ಟ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಇದಕ್ಕೂ ಮುನ್ನ ಆಸ್ಪತ್ರೆಯ ಟ್ರಾಮಾಕೇರ್ ಸೆಂಟರ್, ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ತೀವ್ರ ನಿಗಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್, ಆರೋಗ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.