ADVERTISEMENT

ತುಮಕೂರು | 'ಭೂ ಹಗರಣ: ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ'

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:42 IST
Last Updated 27 ಜೂನ್ 2025, 15:42 IST
ಶುಭ ಕಲ್ಯಾಣ್
ಶುಭ ಕಲ್ಯಾಣ್   

ತುಮಕೂರು: ಭೂ ಹಗರಣ ಹಾಗೂ ಡಿಜಿಟಲ್ ಸಹಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.

‘ಹಗರಣ ನಡೆದಿರುವುದು ಸತ್ಯ. ಆದರೆ ತಮ್ಮಿಂದ ನಡೆದಿಲ್ಲ’ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಡಿಜಿಟಲ್ ಸಹಿ ದುರುಪಯೋಗ ಹಾಗೂ ದೊಡ್ಡ ಮಟ್ಟದ ಭೂ ಹಗರಣ ನಡೆದಿದ್ದರೂ ಈವರೆಗೂ ಎಫ್‌ಐಆರ್ ದಾಖಲಿಸದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲಾಧಿಕಾರಿಯ ಡಿಜಿಟಲ್ ಸಹಿ ದುರುಪಯೋಗ ಪಡಿಸಿಕೊಂಡು ಮಧುಗಿರಿ ತಾಲ್ಲೂಕಿನಲ್ಲಿ 43 ಎಕರೆ 11 ಗುಂಟೆ ಜಮೀನಿನ ಭೂ ಪರಿವರ್ತನೆ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ADVERTISEMENT

ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ತುಮ್ಮಲು ಗ್ರಾಮದ ಹಲವು ಸರ್ವೆ ನಂಬರ್‌ಗಳ ಜಮೀನು ಅರ್ಜಿಗಳು ಭೂ ಪರಿವರ್ತನೆಗಾಗಿ ತಮ್ಮ ಕಚೇರಿಗೆ ಸಲ್ಲಿಕೆಯಾಗಿದ್ದವು. ಇವುಗಳ ಪರಿಶೀಲನೆ ಸಂದರ್ಭದಲ್ಲಿ ಕೆಲವು ನ್ಯೂನತೆಗಳು ಕಂಡು ಬಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತುಮ್ಮಲು ಗ್ರಾಮದಲ್ಲಿ ಈ ಹಿಂದೆ 43 ಎಕರೆ 11 ಗುಂಟೆ ಜಮೀನು ಮಂಜೂರಾತಿಯಲ್ಲಿ ಹಗರಣ ನಡೆದಿದೆ. ಈ ಜಮೀನು ಹಲವಾರು ಸರ್ವೇ ನಂಬರ್‌ಗಳನ್ನು ಒಳಗೊಂಡಿದೆ. ಈ ಬಗ್ಗೆ ಮಧುಗಿರಿ ತಾಲ್ಲೂಕು ಕಚೇರಿಯಲ್ಲಿರುವ ಮೂಲ ಕಡತಗಳನ್ನು ಪರಿಶೀಲಿಸಿದಾಗ 2005ರಲ್ಲೇ ಮಂಜೂರಾಗಿರುವುದು ಗೊತ್ತಾಗುತ್ತದೆ. ಆದರೆ ಇವು ನಕಲಿ ದಾಖಲೆಗಳೆಂಬುದು ಮೇಲುನೋಟಕ್ಕೆ ಕಂಡು ಬಂದಿವೆ ಎಂದು ಹೇಳಿದ್ದಾರೆ.

ಜಮೀನಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಮಧುಗಿರಿ ಉಪ ವಿಭಾಗಾಧಿಕಾರಿ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ನಕಲಿ ದಾಖಲೆಗಳನ್ನು ಸಾರ್ವಜನಿಕ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ತನಿಖಾಧಿಕಾರಿಗಳಿಂದ ವರದಿ ಬಂದ ತಕ್ಷಣ ಸರ್ಕಾರಿ ಜಮೀನು ಎಂದು ದೃಢಪಟ್ಟಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತೆ ತಹಶೀಲ್ದಾರ್‌ಗೆ ಆದೇಶಿಸಲಾಗುವುದು. ನಕಲಿ ದಾಖಲೆ ಸೃಷ್ಟಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಧುಗಿರಿ ತಹಶೀಲ್ದಾರ್‌ಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.