ADVERTISEMENT

ವಿವಿಧೆಡೆ ಸರಳ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನೆನೆದ ಜನರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 6:55 IST
Last Updated 16 ಆಗಸ್ಟ್ 2020, 6:55 IST
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮೇಯರ್ ಫರೀದಾ ಬೇಗಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕ ಎಸ್.ಷಫಿ ಅಹಮದ್, ಮುಖಂಡರಾದ ಆಟೊ ರಾಜು, ಮೆಹಬೂಬ ಪಾಷ, ಗೀತಾ ರುದ್ರೇಶ್, ನಾಗಮಣಿ, ನರಸೀಯಪ್ಪ, ಆರ್.ನಾರಾಯಣ, ಪುಟ್ಟರಾಜು, ಗೀತಮ್ಮ, ಟಿ.ಬಿ.ಮಲ್ಲೇಶ್, ಮಂಜಣ್ಣ, ಕುಮಾರಸ್ವಾಮಿ, ಶರತ್ ಇದ್ದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮೇಯರ್ ಫರೀದಾ ಬೇಗಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕ ಎಸ್.ಷಫಿ ಅಹಮದ್, ಮುಖಂಡರಾದ ಆಟೊ ರಾಜು, ಮೆಹಬೂಬ ಪಾಷ, ಗೀತಾ ರುದ್ರೇಶ್, ನಾಗಮಣಿ, ನರಸೀಯಪ್ಪ, ಆರ್.ನಾರಾಯಣ, ಪುಟ್ಟರಾಜು, ಗೀತಮ್ಮ, ಟಿ.ಬಿ.ಮಲ್ಲೇಶ್, ಮಂಜಣ್ಣ, ಕುಮಾರಸ್ವಾಮಿ, ಶರತ್ ಇದ್ದರು.   

ತುಮಕೂರು: ಜಿಲ್ಲೆಯ ವಿವಿಧೆಡೆ ಶನಿವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್: ದೇಶವನ್ನು ಕೊರೊನಾದಿಂದ ಸ್ವಾತಂತ್ರ್ಯಗೊಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಂಚೂಣಿಯಲ್ಲಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಅವರ ತ್ಯಾಗ, ಬಲಿದಾನಗಳೇ ಕಾರಣ ಎಂದು ಹೇಳಿದರು.

ADVERTISEMENT

ತುಮಕೂರು ವಿವಿ: ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ‘ಪ್ರಪಂಚ ಕೊರೊನಾದಂತಹ ಹಲವು ಸಮಸ್ಯೆಗಳನ್ನು ಹಿಂದೆಯೂ ಸಮರ್ಥವಾಗಿ ಎದುರಿಸಿದೆ. ನೈತಿಕತೆಯಿಂದ ಕೂಡಿದ ಆತ್ಮಸ್ಥೈರ್ಯದಿಂದ ಎಂತಹ ಸಮಸ್ಯೆಗಳನ್ನೂ ಸಮರ್ಥವಾಗಿ ಎದುರಿಸಬಹುದು’ ಎಂದರು.

ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಕ್ರೀಡಾ ಕಾರ್ಯದರ್ಶಿ ಆರ್.ಸುದೀಪ್ ಕುಮಾರ್, ಸಿಬಂತಿ ಪದ್ಮನಾಭ ಇದ್ದರು.‌

ಎಸ್‌ಎಸ್‌ಐಟಿ: ತುಮಕೂರು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಹಾತ್ಮರ ಭಾವಚಿತ್ರಗಳಿಗೆ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಪುಷ್ಟ ನಮನ ಸಲ್ಲಿಸಿದರು. ನಂತರ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ‘ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತದ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದೆ’ ಎಂದರು.

ಈ ಸಂದರ್ಭದಲ್ಲಿ ಡೀನ್ ಪ್ರೊ.ಸಿದ್ದಪ್ಪ, ಪರೀಕ್ಷಾಂಗ ಕುಲಸಚಿವ ಡಾ.ಕರುಣಾಕರ್, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿದೇರ್ಶಕ ಡಾ.ಬಿ.ಟಿ.ಮುದ್ದೇಶ್, ಎನ್‌ಸಿಸಿ ಅಧಿಕಾರಿ ಡಾ.ಜಯಪ್ರಕಾಶ್, ಎನ್‌ಎಸ್‌ಎಸ್ ಅಧಿಕಾರಿ ರವಿಕಿರಣ್ ಇದ್ದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘ: ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ.ಎನ್.ಸಂಪತ್‌ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಟಿ.ಎಂ.ಬಸವರಾಜು, ಕೆ.ಆರ್.ಎಂ.ಸುದರ್ಶನ್‌ ಇದ್ದರು.

ವಿದ್ಯಾನಿಧಿ ಪದವಿಪೂರ್ವ ಕಾಲೇಜು: ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಇನ್ನರ್ ವೀಲ್ ಕ್ಲಬ್ ಮರಳೂರು ಹಾಗೂ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯಿಂದ 74ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಇನ್ನರ್ ವೀಲ್ ಸಂಸ್ಥೆಯ ಖಜಾಂಚಿ ಚಂದನ ಶರತ್, ಸದಸ್ಯರಾದ ನಾಗಲತಾ, ಕನ್ನಡ ಉಪನ್ಯಾಸಕ ಗೋವಿಂದರಾಜು, ಕೆ.ಆರ್.ರಾಜೀವ್, ಸಂತೋಷ್ ಇದ್ದರು.

ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ (ಟಿಎಸ್‌ಸಿ-2019) ನಡೆದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಿರ್ದೇಶನಾಲಯವನ್ನು ಪ್ರತಿನಿಧಿಸುವ ಅಖಿಲ ಭಾರತ ಥಾಲ್ ಸೈನಿಕ್ ಶಿಬಿರದಲ್ಲಿ ಭಾಗವಹಿಸಿ ಚಿನ್ನದಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಎ.ವೈ.ಸಾರ್ಜೆಂಟ್ ಅವರನ್ನು ಸನ್ಮಾನಿಸಲಾಯಿತು.

ಕಟ್ಟಡ ಕಾರ್ಮಿಕರ ಸಂಘ: ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಹೆಮ್ಮೆ ತುಮಕೂರು ಜಿಲ್ಲೆಗೂ ಇದೆ. ಇದರ ಇತಿಹಾಸವನ್ನು ಕಾರ್ಮಿಕರು ತಿಳಿಯಬೇಕು ಎಂದು ಶ್ರಮಿಕ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ತಿಳಿಸಿದರು.

ನಗರದ ಭೀಮಸಂದ್ರದಲ್ಲಿರುವ ಶ್ರಮಿಕ ಕಟ್ಟಡ ಕಾರ್ಮಿಕರ ಸಂಘದ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷರಾದ ಗೋವಿಂದರಾಜು ಧ್ವಜಾರೋಹಣ ನೆರವೇರಿಸಿದರು. ಸಂಘದ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ಅಂಜಿನಪ್ಪ, ವೀರಣ್ಣ, ದೇವರಾಜು, ಸುಮಿತ್ರಮ್ಮ, ಹರೀಶ್‌ಬಾಬು, ಕಾಳಯ್ಯ, ತಿಮ್ಮಯ್ಯ, ರಾಜಣ್ಣ, ತಿಮ್ಮೇಗೌಡ, ಕಾರ್ಯದರ್ಶಿ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.