ADVERTISEMENT

ತುಮಕೂರು ಹುಣಸೆಗೆ ಜಾಗತಿಕ ಮನ್ನಣೆ

ಕೆ.ಜೆ.ಮರಿಯಪ್ಪ
Published 22 ಮಾರ್ಚ್ 2021, 20:01 IST
Last Updated 22 ಮಾರ್ಚ್ 2021, 20:01 IST
ಲಕ್ಷ್ಮಣ ಅವರ ಜಮೀನಿನಲ್ಲಿ ಹುಣಸೆ ಹಣ್ಣು ಪರಿಶೀಲಿಸಿದ ವಿಜ್ಞಾನಿಗಳು
ಲಕ್ಷ್ಮಣ ಅವರ ಜಮೀನಿನಲ್ಲಿ ಹುಣಸೆ ಹಣ್ಣು ಪರಿಶೀಲಿಸಿದ ವಿಜ್ಞಾನಿಗಳು   

ತುಮಕೂರು: ಹುಣಸೆ ಹಣ್ಣಿನ ಹೊಸ ತಳಿಯೊಂದನ್ನು ಗುರುತಿಸುವ ಮೂಲಕ ಜಿಲ್ಲೆಯ ಹುಣಸೆಗೆ ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದು ಕೊಟ್ಟಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ತಳಿ ಗುರುತಿಸಿ ಹೆಸರಿಸಲಾಗಿದೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು (ಐಸಿಎಆರ್) ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದ ರೈತ ಲಕ್ಷ್ಮಣ ಅವರು ಬೆಳೆಸಿರುವ ಹುಣಸೆಯನ್ನು ಉತ್ಕೃಷ್ಟ ಗುಣಮಟ್ಟದ ತಳಿಯೆಂದು ಗುರುತಿಸಿದೆ. ರೈತ ‘ಲಕ್ಷ್ಮಣ’ ಅವರ ಹೆಸರನ್ನೇ ಈ ತಳಿಗೆನಾಮಕರಣ ಮಾಡಲಾಗಿದೆ.

ಜಿಲ್ಲೆಯಲ್ಲಿ ಸದಾ ಬರಕ್ಕೆ ತುತ್ತಾಗುವ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾ ಣದಲ್ಲಿ ಹುಣಸೆ ಬೆಳೆಸಲಾಗಿದೆ. ಶಿರಾ, ತುಮಕೂರು ಹಾಗೂ ಕಡಿಮೆ ಮಳೆಯಾಗುವ ಜಿಲ್ಲೆಯ ಇತರೆಡೆಯೂ ಬೆಳೆಯಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಹುಣಸೆ ಹಣ್ಣಿನಿಂದ ವರ್ಷಕ್ಕೆ ₹500 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಶೇಂಗಾ ಹೊರತುಪಡಿಸಿದರೆ ಬರಪೀಡಿತ ಪ್ರದೇಶಗಳ ಜನರಿಗೆ ಆದಾಯ ತಂದುಕೊಡುವ ಏಕೈಕ ಬೆಳೆ ಹುಣಸೆ.

ADVERTISEMENT

ಜಿಲ್ಲೆಯ ಹುಣಸೆಗೆ ಬ್ರ್ಯಾಂಡ್ ರೂಪ ತಂದುಕೊಟ್ಟರೆ, ಅದಕ್ಕೆ ಮಾರುಕಟ್ಟೆ ಸೃಷ್ಟಿಸಿ ರೈತರನ್ನು ಆರ್ಥಿಕವಾಗಿ ಇನ್ನಷ್ಟು ಮುಂದೆ ತರಬಹುದು ಎಂಬ ಗುರಿಯೊಂದಿಗೆ ಹೊಸ ತಳಿಗಳನ್ನು ಗುರು ತಿಸುವ ಪ್ರಯತ್ನ ನಡೆದಿದೆ.

ಅಧ್ಯಯನ– ಮಾನದಂಡ: ತೋಟಗಾರಿಕಾ ಸಂಸ್ಥೆ ವಿಜ್ಞಾನಿಗಳು ಸತತವಾಗಿ ಮೂರು ವರ್ಷಗಳಿಂದ ಅಧ್ಯಯನ ನಡೆಸಿ 40 ವರ್ಷಗಳಷ್ಟು ಹಳೆಯದಾದ ‘ಲಕ್ಷ್ಮಣ’ ತಳಿಯನ್ನು ಗುರುತಿಸಿದ್ದಾರೆ. ಈ ಮರ ಪ್ರತಿ ವರ್ಷವೂ ಸಮ ಪ್ರಮಾಣದಲ್ಲಿ ಇಳುವರಿ ಕೊಡುತ್ತದೆ. ಹಣ್ಣಿನ ದಪ್ಪ, ಉದ್ದ, ಬಣ್ಣ, ತಿರುಳು, ಸ್ವಾದದಲ್ಲಿ ಇತರ ಹಣ್ಣಿಗಿಂತ ವಿಭಿನ್ನ, ವಿಶಿಷ್ಟವಾಗಿದೆ. ‘ಲಕ್ಷ್ಮಣ’ ಮರದಲ್ಲಿ ಸುಮಾರು 2.50 ಕ್ವಿಂಟಲ್ ಹಣ್ಣು ಸಿಕ್ಕರೆ, ಸಾಮಾನ್ಯ ತಳಿಯ ಮರದಲ್ಲಿ 1.50 ಕ್ವಿಂಟಲ್ ಸಿಗುತ್ತದೆ. ಇತರ ತಳಿಯ ಹಣ್ಣಿಗಿಂತ ಕ್ವಿಂಟಲ್‌ಗೆ ₹ 15 ಸಾವಿರದಿಂದ ₹ 20 ಸಾವಿರ ಅಧಿಕ ಬೆಲೆ ಇರುತ್ತದೆ. ಕಳೆದ ವರ್ಷ ಈ ಮರದಿಂದ ₹ 1 ಲಕ್ಷ ಆದಾಯ ಬಂದಿದೆ.

ಈ ಮರದ ರೈತನ ಜತೆಗೆ ತೋಟಗಾರಿಕಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರವೇ ಸಸಿಗಳನ್ನು ಬೆಳೆಸಿ ಮಾರಾಟ ಮಾಡಲಿದೆ. ಇದರಿಂದ ಬರುವ ಹಣದಲ್ಲಿ ಸ್ವಲ್ಪ ಭಾಗವನ್ನು ರೈತನಿಗೂ ಕೊಡಲಾಗುತ್ತದೆ.

‘ಬೀಜ ಹಾಕಿ ಗಿಡ ಬೆಳೆಸಿದರೆ ತಾಯಿ ಮರದ ಮೂಲ ಗುಣ ಪೂರ್ಣ ಪ್ರಮಾಣದಲ್ಲಿ ಬರುವುದಿಲ್ಲ. ಕಸಿ ಮಾಡಿ ಬೆಳೆಸಿದರೆ ಮಾತ್ರ ತಾಯಿ ಗುಣ ಬರುತ್ತದೆ’ ಎಂದು ತಜ್ಞರು ಹೇಳುತ್ತಾರೆ.

ಒಂದೇ ಬೀಜ ಆದರೂ ವ್ಯತ್ಯಾಸ

‘ನೆಲಕ್ಕೆ ಒಂದೇ ಮರದ ಎರಡು ಹುಣಸೆ ಬೀಜ ಹಾಕಿದೆ. ಎರಡೂ ಬೆಳೆದಿವೆ. ಒಂದು ಸಾಮಾನ್ಯ ಪ್ರಮಾಣದಲ್ಲಿ ಹಣ್ಣು ಕೊಟ್ಟರೆ, ಮತ್ತೊಂದು ಉತ್ತಮ ಗುಣಮಟ್ಟದ ಹಣ್ಣು ಬಿಡುತ್ತಿದೆ. ಏಕೆ ವ್ಯತ್ಯಾಸವಾಯಿತು ಎಂಬುದು ಗೊತ್ತಿಲ್ಲ’ ಎಂದು ರೈತ ಲಕ್ಷ್ಮಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.