ADVERTISEMENT

ತುಮಕೂರು ರೈಲು ನಿಲ್ದಾಣದ ಲಿಫ್ಟ್ ಸ್ಥಗಿತ

ಉದ್ಘಾಟನೆಗೆ ಸೀಮಿತ, ಪ್ರಯಾಣಿಕರ ಕೊರತೆಯಿಂದಾಗಿ ಕೆಲಸ ನಿರ್ವಹಿಸದ ಯಂತ್ರಗಳು

ಅನಿಲ್ ಕುಮಾರ್ ಜಿ
Published 21 ಸೆಪ್ಟೆಂಬರ್ 2020, 2:05 IST
Last Updated 21 ಸೆಪ್ಟೆಂಬರ್ 2020, 2:05 IST
ತುಮಕೂರು ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಲಿಫ್ಟ್‌
ತುಮಕೂರು ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಲಿಫ್ಟ್‌   

ತುಮಕೂರು: ದಶಕಗಳ ಹೋರಾಟದ ಫಲವಾಗಿ ನಗರದ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಲಿಫ್ಟ್‌ಗಳು ಕೇವಲ ಉದ್ಘಾಟನೆಗೆ ಸೀಮಿತವಾಗಿವೆ. ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಆದರೆ, ಇದಕ್ಕೆ ರ‍್ಯಾಂಪ್ ಅಳವಡಿಸಿರಲಿಲ್ಲ. ಇದರಿಂದ ವೃದ್ಧರು, ಮಹಿಳೆಯರು, ಅಶಕ್ತರು, ಗರ್ಭಿಣಿಯರು, ಅಂಗವಿಕಲರು ಸಂಚರಿಸಲು ತೊಂದರೆ ಆಗಿತ್ತು. ಲಿಫ್ಟ್‌ಗಳ ಅಳವಡಿಕೆಯಿಂದ ಸಹಕಾರಿಯಾಗಿತ್ತು. ಆದರೆ, ಪ್ರಯಾಣಿಕರ ಕೊರತೆಯ ನೆಪವೊಡ್ಡಿ ಅವುಗಳನ್ನು ಸ್ಥಗಿತಗೊಳಿಸಲಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿಲ್ದಾಣದ ಒಂದು, ಎರಡು ಮತ್ತು ಮೂರನೇ ಪ್ಲಾಟ್ ಫಾರ್ಮ್‌ಗಳಲ್ಲಿ ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಇವುಗಳಿಗೆ ಜುಲೈ 30ರಂದು ಚಾಲನೆ ನೀಡಿದ್ದರು. ಆದರೆ, ಉದ್ಘಾಟನೆ ದಿನ ಮಾತ್ರವೇ ಬಳಕೆಯಾದ ಲಿಫ್ಟ್‌ಗಳು ನಂತರ ಕಾರ್ಯ ಸ್ಥಗಿತಗೊಳಿಸಿವೆ.

ADVERTISEMENT

ಜಿಲ್ಲೆ ಬೆಂಗಳೂರು ಹತ್ತಿರ ಇರುವುದರಿಂದ ಸಾವಿರಾರು ಮಂದಿ ರೈಲುಗಳ ಮೂಲಕವೇ ತಮ್ಮ ಕೆಲಸ ಕಾರ್ಯ, ಕಚೇರಿಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಇವರೆಲ್ಲರೂ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಸ್ಕೈವಾಕ್ ಮೆಟ್ಟಿಲು ಇದ್ದರೂ ವೃದ್ಧರು, ಮಹಿಳೆಯರು, ಗರ್ಭಿಣಿಯರು ಹತ್ತಲು, ಇಳಿಯಲು ಸಾಧ್ಯವಾಗುತ್ತಿಲ್ಲ.

70 ರೈಲು ಸಂಚಾರ: ಲಾಕ್‌ಡೌನ್‌ಗೂ ಮುನ್ನ ನಿತ್ಯ 70 ರೈಲುಗಳು ತುಮಕೂರು ರೈಲು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದವು. ಆದರೆ, ಇದೀಗ ಜನಶತಾಬ್ಧಿ ಸೇರಿದಂತೆ ಬೆರಳೆಣಿಕೆ ರೈಲುಗಳು ಮಾತ್ರವೇ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯೂ ಕ್ಷೀಣಿಸಿದೆ. ಬೆರಳೆಣಿಕೆ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್‌ಗಳನ್ನು ಚಾಲನೆ ಮಾಡಿದರೆ ಅಧಿಕ ಖರ್ಚು ಬರಲಿದೆ. ಹಾಗಾಗಿ ಯಂತ್ರಗಳನ್ನು ನಿಲ್ಲಿಸಲಾಗಿದೆ ಎನ್ನುವುದು ರೈಲ್ವೆ ಇಲಾಖೆ ಸಿಬ್ಬಂದಿಯ ವಾದ.

ಲಿಫ್ಟ್‌ಗಳು ಚಾಲನೆಯಲ್ಲಿ ಇಲ್ಲದಿರುವುದನ್ನು ತಿಳಿಯದ ಪ್ರಯಾಣಿಕರು ಯಂತ್ರಗಳ ಮುಂದೆ ನಿಂತು ಬಟನ್‌ ಒತ್ತುವುದು, ಕೊನೆಗೆ ಬಾಗಿಲು ತೆರೆದುಕೊಳ್ಳದಿರುವುದು ಮನಗಂಡು ಬೇಸರದಿಂದ ಮೇಲ್ಸೇತುವೆ ಬಳಸಿ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮತ್ತೊಮ್ಮೆ ಉದ್ಘಾಟನೆ!

ಬಹುಶಃ ಪ್ರಯಾಣಿಕರ ಕೊರತೆಯಿಂದ ಲಿಫ್ಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸಾಧ್ಯತೆ ಇದೆ. ಈಗಾಗಲೇ ರೈಲ್ವೆ ಅಧಿಕಾರಿಗಳು ಲಿಫ್ಟ್‌ಗಳನ್ನು ಉದ್ಘಾಟಿಸಿದ್ದಾರೆ. ಆದರೆ, ಸಿದ್ಧಗಂಗಾ ಮಠದ ಬಳಿ ಪಾದಚಾರಿ ಸೇತುವೆಗೆ ಚಾಲನೆ ನೀಡಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಬರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಮತ್ತೊಮ್ಮೆ ಲಿಫ್ಟ್‌ಗಳು ಹಾಗೂ ರೈಲು ನಿಲ್ದಾಣದ ಮುಂದೆ ಸ್ಥಾಪಿಸಿರುವ ಧ್ವಜ ಸ್ತಂಭ ಉದ್ಘಾಟಿಸುವ ಆಲೋಚನೆಯಿಂದ ಲಿಫ್ಟ್‌ಗಳನ್ನು ಸ್ಥಗಿತಗೊಳಿಸಿರುವ ಸಾಧ್ಯತೆ ಇದೆ ಎನ್ನುತ್ತಾರೆ ನೈಋತ್ಯ ರೈಲ್ವೆ ವಲಯದ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.