ADVERTISEMENT

ತುಮಕೂರು ವಿ.ವಿಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:05 IST
Last Updated 29 ಫೆಬ್ರುವರಿ 2024, 8:05 IST
<div class="paragraphs"><p>ತುಮಕೂರು ವಿ.ವಿ&nbsp;ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ವಿಭಾಗಗಳು ಜಂಟಿಯಾಗಿ ಹಮ್ಮಿಕೊಂಡಿರುವ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಿದರು.</p></div>

ತುಮಕೂರು ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ವಿಭಾಗಗಳು ಜಂಟಿಯಾಗಿ ಹಮ್ಮಿಕೊಂಡಿರುವ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಿದರು.

   

ತುಮಕೂರು: ಕಷ್ಟ ಕಾಲವಿದ್ದಾಗ, ವಿಪ್ಪತ್ತು, ವಿಷಮ ಪರಿಸ್ಥಿತಿ ಎದುರಾದಾಗ ಮನುಷ್ಯರಲ್ಲಿ ವಿಶೇಷವಾದಂತಹ ಜಾಗೃತಿ ಮೂಡುತ್ತದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ನೆಮ್ಮದಿ ಕಾಲದಲ್ಲಿ ಜಾಗೃತಿ ಉಂಟಾಗುವುದಿಲ್ಲ. ದೊಡ್ಡ ಗ್ರಂಥಗಳು, ಪ್ರಮುಖ ಕೃತಿಗಳು ಉತ್ತಮ ಕಾಲದಲ್ಲಿ ಮೂಡಿ ಬಂದಿಲ್ಲ. ಕಷ್ಟ ಕಾಲದಲ್ಲೇ ರಾಮಾಯಣ, ಮಹಾಭಾರತದಂತಹ ಕೃತಿಗಳು ರಚನೆಯಾಗಿರುವುದು. ಕಷ್ಟ ಕಾಲದಲ್ಲೇ ಮನಸ್ಸು ಜಾಗೃತವಾಗಲಿದ್ದು, ಅಂತಹ ಸಮಯದಲ್ಲೇ ಉತ್ತಮ ಕೃತಿಗಳು ಒಡಮೂಡಿವೆ. ನಮ್ಮ ಸಾಮರ್ಥ್ಯವನ್ನು ಇಂತಹ ಕಷ್ಟ ಕಾಲಗಳು ಪಕ್ವಗೊಳಿಸುತ್ತವೆ ಎಂದು ಅವರು ಹೇಳಿದರು.

ಕಲೆಯು ವಿಪರ್ಯಾಸಗಳನ್ನು ಗ್ರಹಿಸಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಲೋಕ ಗ್ರಹಿಕೆಯನ್ನು ಕೇಂದ್ರೀಕರಿಸಿ ಜಾಗೃತಿಯ ಚಲನೆಯನ್ನು ಆಂತರ್ಯದಲ್ಲಿ ಸೃಷ್ಟಿಸುತ್ತದೆ. ಅರ್ಥವಾಗದೇ ಇರುವ ವಿಷಯವೇ ಲೋಕ ಗ್ರಹಿಕೆ. ಬದುಕು ಉದ್ವಿಗ್ನತೆ ಬಯಸಬೇಕು. ಸಂಬಂಧವನ್ನು ಬೆಸೆಯುವುದೇ ಕಲೆಯಾಗಿ ಮಾರ್ಪಾಡಾಗುತ್ತದೆ ಎಂದು ನುಡಿದರು.

ಮಹಾಭಾರತ ಗಮನಿಸಿದಾಗ ಸೋತವನ ದುಃಖಕ್ಕಿಂತ ಗೆದ್ದವನ ದುಃಖ ಕಾಣಬಹುದು. ಇದೇ ಕಲೆಯ ಆಸ್ತಿ. ಕಲೆ ಗೆದ್ದವನ ಕಂಬನಿಯನ್ನು ಹರಸುತ್ತದೆ, ಸೋತವನ ದುಃಖವನ್ನು ಒರೆಸುತ್ತದೆ ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ವಿದ್ಯಾರ್ಥಿಗಳಿಗೆ ಸಾಹಿತ್ಯದ ಕೊರತೆ ಇರಬಾರದು. ಕಲೆ, ಸಾಹಿತ್ಯಗಳಿಂದ ಮನಸ್ಸು ಅರಳುತ್ತದೆ’ ಎಂದು ಹೇಳಿದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ ನಿರೂಪಿಸಿದರು.

ಮೊದಲ ದಿನದ ಸಾಹಿತ್ಯೋತ್ಸವದಲ್ಲಿ ಮುಂಬೈ ಐಐಟಿ ಪ್ರಾಧ್ಯಾಪಕ ಮೃಣಾಲ್ ಕೌಲ್ ‘ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿ’ ಕುರಿತು, ಬೆಂಗಳೂರಿನ ಅಜೀಂ ಪ್ರೇಮ್‍ಜಿ ವಿ.ವಿ ಪ್ರಾಧ್ಯಾಪಕ ಎ.ನಾರಾಯಣ ‘ಕರ್ನಾಟಕದ ರಾಜಕಾರಣ– ಭವಿಷ್ಯದ ಸಾಧ್ಯತೆ’ ಕುರಿತು ಮಾತನಾಡಿದರು. ನೀನಾಸಂ ರಂಗಭೂಮಿ ಕಲಾವಿದ ಜಿ.ಕೆ.ನಂದಕುಮಾರ್ ಕಥಾ ಪ್ರಸ್ತುತಿಪಡಿಸಿದರು. ಬೆಂಗಳೂರು ವಿ.ವಿ ಪ್ರಾಧ್ಯಾಪಕಿ ಕೆ.ಎಸ್.ವೈಶಾಲಿ ಸಂಗೀತ- ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ಜಯಂತ್ ಕಾಯ್ಕಿಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.