ADVERTISEMENT

ಮಹಿಳೆಯರಿಗೆ ಸಮಗ್ರ ಕೃಷಿಯ ಸಹಾಯಹಸ್ತ: ಶಾಲಿನಿ ರಜನೀಶ್

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಿಂದ ಪ್ರಾಯೋಗಿಕವಾಗಿ ಜಾರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 12:20 IST
Last Updated 14 ಆಗಸ್ಟ್ 2019, 12:20 IST

ತುಮಕೂರು: ಎಲ್ಲ ಋತುಗಳಲ್ಲಿಯೂ ಆದಾಯ ತರುವಂತಹ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯೀಕರಣ ಒಳಗೊಂಡ ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಳ್ಳಲು ಜಿಲ್ಲೆಯಲ್ಲಿರುವ ಸ್ವ–ಸಹಾಯ ಗುಂಪಿನ ಸದಸ್ಯೆಯರಿಗೆ ವಿವಿಧ ಇಲಾಖಾ ಕಾರ್ಯಕ್ರಮಗಳಡಿ ಆರ್ಥಿಕ ನೆರವು ನೀಡಲು ಯೋಜಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

1 ಹೆಕ್ಟೇರ್‌ ವಿಸ್ತೀರ್ಣದ ಜಮೀನನ ಖಾತೆ ಹೊಂದಿರುವ ಸದಸ್ಯೆಯರು ಈ ಸೌಲಭ್ಯ ಪಡೆದುಕೊಳ್ಳಬಹುದು. ಈ ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದೆ. ಜಿಲ್ಲೆಯ ರೈತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಮಹಿಳೆಯರಿಗೆ ಮಣ್ಣಿನ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ, ನೀರಿನ ಸದ್ಬಳಕೆ ಹಾಗೂ ಮರುಬಳಕೆ, ಕೃಷಿ ತ್ಯಾಜ್ಯದ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ, ಕೃಷಿ ಚಟುವಟಿಕೆ ಬಗ್ಗೆ ಲೆಕ್ಕಪತ್ರ ನಿರ್ವಹಣೆ, ಲಾಭ-ನಷ್ಟದ ವರದಿ ತಯಾರಿಕೆ ಬಗ್ಗೆ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯೋಜನೆಗೆ ನಬಾರ್ಡ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ)ದ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಪ್ರತಿ ಸಂಘದ ಸದಸ್ಯೆಯರಿಗೆ ₹ 75,000 ಆರ್ಥಿಕ ನೆರವು ನೀಡಲು ಸಂಜೀವಿನಿ ಮುಂದೆ ಬಂದಿದೆ. ರೈತ ಮಹಿಳೆಯರಿಗೆ ಉತ್ತೇಜನ ನೀಡಬೇಕು, ಅವರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಸಂಜೀವಿನಿ ವ್ಯವಸ್ಥಾಪಕ ನಿರ್ದೇಶಕಿ ಮಮತಾ, ಜಿಲ್ಲೆಯಲ್ಲಿನ ನೇಕಾರರ ಸಮೂಹಗಳ ಲಾಭಾಂಶ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲಾಗುತ್ತದೆ. ನೇಯ್ದ ಒಂದು ಸೀರೆಗೆ ₹ 2,000 ಮಾತ್ರ ನೇಕಾರರಿಗೆ ದಕ್ಕುತ್ತಿದೆ. ಆದರೆ, ಅದೇ ಸೀರೆ ಗ್ರಾಹಕರಿಗೆ ₹ 20,000ಕ್ಕೆ ಮಾರಾಟ ಆಗುತ್ತಿದೆ. ಇಲ್ಲಿ ಮಧ್ಯವರ್ತಿಗಳು ಹಾವಳಿ ಹೆಚ್ಚಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.