ADVERTISEMENT

ಕುಣಿಗಲ್: ತೆಪ್ಪಸಂದ್ರ– ಗಿರಿನಗರದ ಬಳಿ ಲೋಡ್‌ಗಟ್ಟಲೆ ಮಾತ್ರೆ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 14:12 IST
Last Updated 3 ಸೆಪ್ಟೆಂಬರ್ 2023, 14:12 IST
ಕುಣಿಗಲ್ ತಾಲ್ಲೂಕು ಗಿರಿನಗರದ ಬಳಿ ತಂದು ಸುರಿದಿರುವ ಮಾತ್ರೆಗಳ ರಾಶಿ
ಕುಣಿಗಲ್ ತಾಲ್ಲೂಕು ಗಿರಿನಗರದ ಬಳಿ ತಂದು ಸುರಿದಿರುವ ಮಾತ್ರೆಗಳ ರಾಶಿ   

ಕುಣಿಗಲ್: ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪಸಂದ್ರ ಗಿರಿನಗರದ ಬಳಿ ಲೋಡ್‌ಗಟ್ಟಲೆ ಔಷಧಿ ಮತ್ತು ಮಾತ್ರೆಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಗ್ರಾಮದ ರಾಜು ಅವರಿಗೆ ಸೇರಿದ ಜಮೀನಿನ ಹಳ್ಳದಲ್ಲಿ ಭಾನುವಾರ ಬೆಳಿಗ್ಗೆ ಮಾತ್ರೆಗಳ ರಾಶಿ ಕಂಡು ಬಂದಿದ್ದು, ಗಾಬರಿಗೊಂಡ ಗ್ರಾಮಸ್ಥರು ಕೂಡಲೇ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ಸಂತೆಮಾವತ್ತೂರು ವೈದ್ಯರಾದ ಪ್ರಸನ್ನ, ಪಿಡಿಒಗೆ ಮಾಹಿತಿ ನೀಡಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಪ್ರತಿಕ್ರಿಯಿಸಿ, ರಾಶಿಗಟ್ಟಳೆ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ಸೇರಿದ್ದಲ್ಲ. ಶೇ 80ರಷ್ಟು ಮಾತ್ರೆಗಳು ಅವಧಿ ಮೀರಿದ್ದವಾಗಿವೆ. ಶೇ 20ರಷ್ಟು ಬಳಕೆಗೆ ಯೋಗ್ಯವಾಗಿದ್ದರೂ, ಪ್ರಯೋಜನಕ್ಕೆ ಬಾರಾದಾಗಿವೆ. ಯಾವುದೋ ಔಷಧಿ ಕಂಪನಿ ಅಥವಾ ಸಗಟು ಮಾರಾಟಗಾರರು ಸಂಗ್ರಹಿಸಿದ್ದ ಮಾತ್ರೆಗಳು ಅವಧಿ ಮೀರಿದ್ದು, ನಿಯಮಾವಳಿ ಪ್ರಕಾರ ರೀ ಸೈಕಲಿಂಗ್ ಪದ್ಧತಿಯಲ್ಲಿ ನಾಶಪಡಿಸಬೇಕಾಗಿತ್ತು. ಆದರೆ ಹಾಗೆ ಮಾಡದೆ ಲಾರಿಯೊಂದರಲ್ಲಿ ತಂದು ಸುರಿದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಪೊಲೀಸರಿಗೆ ಮತ್ತು ಔಷಧಿ ನಿಯಂತ್ರಕರಿಗೆ ದೂರು ನೀಡುವುದಾಗಿ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.