ADVERTISEMENT

ಸಂಪಿಗೆ: ಶ್ರೀನಿವಾಸ ಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2019, 12:37 IST
Last Updated 17 ಮೇ 2019, 12:37 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಜರುಗಿತು
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಜರುಗಿತು   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಶ್ರೀಮುಖ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.

ಬ್ರಹ್ಮೋತ್ಸವ ಶ್ರೀಮುಖವು ಮೇ 10ರಿಂದ ಪ್ರಾರಂಭವಾಗಿತು. ಈ ವೇಳೆ ಅನೇಕ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ಸಾಗಿದವು.

ಬ್ರಹ್ಮೋತ್ಸವ ಶ್ರೀಮುಖದ ಮೊದಲ ದಿನವಾದ ಶುಕ್ರವಾರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿ ದೇವರಿಗೆ 108 ಲೀಟರ್ ಹಾಲಿನಿಂದ ಕ್ಷೀರ ಮತ್ತು ಪಂಚಾಮೃತಾಭಿಷೇಕ ಮಾಡಲಾಯಿತು. ನಂತರ ಸಂಜೆ ಗಣೇಶ ಪೂಜೆ, ಅನುಜ್ಞೆ, ಮೈತ್ರಿಕಾ, ಸಂಗ್ರಹಣ ಪೂರ್ವಕ, ಅಂಕುರಾರ್ಪಣೆ, ಅಧಿವಾಸು ರಕ್ಷಾಬಂಧನ ಅರಣಿಸೇವೆ ಮಾಡಿ ಹಂಸವಾಹನೋತ್ಸವ ನಡೆಸಲಾಯಿತು.

ADVERTISEMENT

ಶನಿವಾರ ಗರುಡ ಪ್ರತಿಷ್ಠೆ, ಪಕ್ಷವಾಹನ, ದೊಡ್ಡ ಗರುಡೋತ್ಸವ ಮಾಡಿದರು. ಭಾನುವಾರ ಧ್ವಜಾರೋಹಣ ನಡೆಸಿ ಭೇರಿತಾಡನ, ಯಾಗಶಾಲಾ ಪ್ರವೇಶ, ವೈರಿಮುಡಿ ಉತ್ಸವ ಮಾಡಲಾಯಿತು.

ನಂತರ ದೇವಾಲಯದ ಮುಂದೆ ವೈಭವದ ಹೂವಿನ ಚಪ್ಪರ ಹಾಕಲಾಯಿತು. ಸೋಮವಾರ ಶೇಷವಾಹನ, ಗಜಲಕ್ಷ್ಮೀ ಮತ್ತು ಮಂಟಪದ ಉತ್ಸವ ನಡೆಯಿತು. ಮಂಗಳವಾರ ದೇವರ ಆನೆ ಉತ್ಸವ ಎಲ್ಲರ ಗಮನ ಸೆಳೆಯಿತು. ಬುಧವಾರ ಪಲ್ಲಕ್ಕಿ ಉತ್ಸವ ಜರುಗಿತು. ಗುರುವಾರ ಶ್ರೀನಿವಾಸ ದೇವರಿಗೆ ಹೂವು ಮತ್ತು ವಿದ್ಯುತ್ ದೀಪಾಲಂಕಾರ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮಧ್ಯಾಹ್ನ 12.30ಕ್ಕೆ ರಥೋತ್ಸವ ಜರುಗಿತು. ನಂತರ ಗೋಪೂಜೆ, ಭಜನೆ, ಕೋಲಾಟ, ನಾಸಿಕ್ ಡೋಲ್ ಡಾ.ಲೋಕೇಶ್‌ಕುಮಾರ್ ತಂಡವರಿಂದ ಜರುಗಿದ ನಾದಸ್ವರ ಎಲ್ಲರ ಮೆಚ್ಚುಗೆ ಗಳಿಸಿತು. ನಂತರ ಭಕ್ತರಿಗೆ ಪಾನಕ, ಫಲಹಾರ ಮತ್ತು ಪ್ರಸಾದ ವಿತರಿಸಲಾಯಿತು.

ಈ ವೇಳೆ ಶಾಸಕ ಮಸಾಲ ಜಯರಾಮ್, ದಂಡಿನಶಿವರ ನಾಡ ಕಚೇರಿಯ ಸಿದ್ದಗಂಗಯ್ಯ, ಧರ್ಮದರ್ಶಿಗಳಾದ ಶ್ರೀಧರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.