ADVERTISEMENT

ವಾಲ್ಮೀಕಿ ಮಹಾನ್ ವಿದ್ವಾಂಸ: ಸಿಂಗದಹಳ್ಳಿ ರಾಜ್‌ಕುಮಾರ್

ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಿಸಲು ಸರ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 2:32 IST
Last Updated 3 ನವೆಂಬರ್ 2020, 2:32 IST
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು   

ಚಿಕ್ಕನಾಯಕನಹಳ್ಳಿ: ‘ಮಹರ್ಷಿ ವಾಲ್ಮೀಕಿಯು ಮಹಾನ್ ವಿದ್ವಾಂಸ ಎಂಬ ಬಗ್ಗೆ ಪಂಜಾಬ್ ಹೈಕೋರ್ಟ್‌ನಲ್ಲಿ ರುಜುವಾತಾಗಿದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಸಿಂಗದಹಳ್ಳಿ ರಾಜ್‌ಕುಮಾರ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಪಂಜಾಬ್ ರಾಜ್ಯದಲ್ಲಿ ನಡೆದಿದ್ದ ಸೆಮಿನಾರ್‌ವೊಂದರಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಪಂಜಾಬ್ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸಮಗ್ರ ಚರ್ಚೆ ಆಯಿತು’ ಎಂದು ತಿಳಿಸಿದರು.

ADVERTISEMENT

‘ರಾಮಾಯಣದಂತಹ ಮಹಾನ್ ಗ್ರಂಥ ರಚಿಸಿ, 24 ಸಾವಿರ ಶ್ಲೋಕಗಳನ್ನು ಬರೆದಿರುವ ವಾಲ್ಮೀಕಿ ಸಮಾಜದ ಆಸ್ತಿ’ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕ ಸಮುದಾಯದ ಜನಸಂಖ್ಯೆ 75 ಲಕ್ಷದಷ್ಟಿದೆ. ಸಮಾಜದವರಿಗೆ ಈಗ ಶೇಕಡ 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಶೇಕಡ 7.5ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸಮುದಾಯದವರು ಅಭಿವೃದ್ಧಿ ಕಾಣಬೇಕಾದರೆ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕವೇ ಮುನ್ನುಗ್ಗಬೇಕು. ಸರ್ಕಾರ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ನಾನು ವಾಲ್ಮೀಕಿ ರಾಮಾಯಣವನ್ನು ಓದಿದ್ದೇನೆ. ವಾಲ್ಮೀಕಿ ಮಹರ್ಷಿಯಾಗಿ ಬದಲಾವಣೆಯಾದ ಬಗೆಗಿನ ವಿಷಯ ಸಮಾಜದಲ್ಲಿ ಅನೇಕರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮತ್ತು ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಸರ್ಕಲ್ ಇನ್‌ಸ್ಪೆಕ್ಟರ್ ವೀಣಾ, ಸಬ್ ಇನ್‌ಸ್ಪೆಕ್ಟರ್ ಹರೀಶ್, ಬಿಇಒ ಕಾತ್ಯಾಯಿನಿ, ವಾಲ್ಮೀಕಿ ಮಹರ್ಷಿ ನಾಯಕ ಜನಾಂಗದ ಅಧ್ಯಕ್ಷ ಮಂಜುನಾಥ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್. ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.