ADVERTISEMENT

ಮನೆ ಮನೆಗಳಲ್ಲಿ ಲಕ್ಷ್ಮಿಗೆ ಸಿಂಗಾರ

ಜಿಲ್ಲೆಯ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 13:56 IST
Last Updated 9 ಆಗಸ್ಟ್ 2019, 13:56 IST
ಗಾಂಧಿನಗರದ ಹರ್ಷವರ್ಧಿನಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ವರಮಹಾಲಕ್ಷ್ಮಿಗೆ ಆರತಿ
ಗಾಂಧಿನಗರದ ಹರ್ಷವರ್ಧಿನಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ವರಮಹಾಲಕ್ಷ್ಮಿಗೆ ಆರತಿ   

ತುಮಕೂರು: ಶ್ರಾವಣದ ಎರಡನೇ ಶುಕ್ರವಾರ ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗಾಂಧಿ ನಗರ, ಎಸ್‌.ಎಸ್.ಪುರಂ, ಬನಶಂಕರಿ, ಬಟವಾಡಿ, ಮಹಾಲಕ್ಷ್ಮಿ ಲೇಔಟ್, ಕೃಷ್ಣ ನಗರ, ಕುವೆಂಪು ನಗರ ಹೀಗೆ ವಿವಿಧ ಬಡಾವಣೆಗಳಲ್ಲಿ ಹಬ್ಬದ ಸಂಭ್ರಮ ಎದ್ದು ಕಂಡಿತ್ತು.

ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮಿ ದೇವಿಯನ್ನು ಕಳಸದಲ್ಲಿ ಪ್ರತಿಷ್ಠಾಪಿಸಿ ನಾನಾ ಅಲಂಕಾರ ಮಾಡಲಾಗಿತ್ತು.

ಮಹಾಲಕ್ಷ್ಮಿನಗರದ ವೆಂಕಟೇಶ್ವರ ದೇಗುಲದಲ್ಲಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕನ್ಯಕಾ ಪರಮೇಶ್ವರಿ ದೇವಾಲಯ, ಬಿ.ಎಚ್ ರಸ್ತೆಯ ಟಿಜಿಎಂಸಿ ಬ್ಯಾಂಕ್ ಮುಂಭಾಗದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀರಾಮನಗರದ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಭಕ್ತರು ಬೆಳಗಿನಿಂದಲೇ ದೇಗುಲಗಳಿಗೆ ಭೇಟಿ ನೀಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ADVERTISEMENT

ವಿಶೇಷವಾಗಿ ಆರ್ಯವೈಶ್ಯ ಸಮುದಾಯದವರ ಮನೆಗಳಲ್ಲಿ ಸಂಭ್ರಮ ಹೆಚ್ಚು ಕಳೆಗಟ್ಟಿತ್ತು. ಹೊಸ ನೋಟು, ನಾಣ್ಯ ಹಾಗೂ, ಆಭರಣಗಳನ್ನು ಲಕ್ಷ್ಮಿ ವಿಗ್ರಹದ ಮುಂದೆ ಕಳಸ ಸಮೇತ ಜೋಡಿಸಿಟ್ಟು ವಿಶೇಷ ಪೂಜೆ ನೆರವೇರಿಸಿದರು. ಹೋಳಿಗೆ ಊಟ ಮಾಡಿ ಸಂಭ್ರಮಿಸಿದರು.

ಮಹಿಳೆಯರು, ಹೆಣ್ಣುಮಕ್ಕಳನ್ನು ಕರೆದು ಅರಿಶಿನ– ಕುಂಕುಮ, ತೆಂಗಿನ ಕಾಯಿ, ರವಿಕೆ ಬಟ್ಟೆ, ವೀಳ್ಯೆದೆಲೆ–ಅಡಿಕೆ, ಬಳೆ ಹಾಗೂ ಹಣ್ಣುಗಳನ್ನು ನೀಡಿ ಸಂಭ್ರಮಿಸಿದರು. ಮನೆಗಳಿಗೆ ಭೇಟಿ ಕೊಟ್ಟವರು ಲಕ್ಷ್ಮಿದೇವಿಗೆ ಆರತಿ ಬೆಳಗಿ ತೆರಳಿದರು.

‘ಬಹಳ ಹಿಂದಿನಿಂದಲೇ ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡುತ್ತಿದ್ದೇವೆ. ಆದರೆ 15 ವರ್ಷಗಳಿಂದ ಹಬ್ಬವನ್ನು ಸಂಭ್ರಮ ಮತ್ತು ವಿಶೇಷ ರೀತಿಯಲ್ಲಿ ಮಾಡುತ್ತಿದ್ದೇವೆ’ ಎಂದು ತಿಳಿಸಿದರು ಗಾಂಧಿನಗರದ ಹರ್ಷವರ್ಧಿನಿ.

ಅವರ ಮನೆಗೆ ಒಬ್ಬರಾದ ಮೇಲೊಬ್ಬರು ಮಹಿಳೆಯರು ಪೂಜೆಗೆ ಬರುತ್ತಲೇ ಇದ್ದರು. ಬಂದವರು ದೇವರ ಮೂರ್ತಿಗೆ ಆರತಿ ಬೆಳಗಿ ಫಲವನ್ನು (ತೆಂಗಿನಕಾಯಿ) ಸ್ವೀಕರಿಸುತ್ತಿದ್ದರು.

‘ಬೆಳ್ಳಿ ಮುಖವಾಡ ನಮ್ಮ ಮನೆಯಲ್ಲಿಯೇ ಇದೆ. ಅದಕ್ಕೆ ಸೀರೆ ತೊಡಿಸಿ ನಾನಾ ರೀತಿಯಲ್ಲಿ ಅಲಂಕಾರ ಮಾಡುತ್ತೇವೆ. ಕಳೆದ ವರ್ಷ ಶಂಕು ಮತ್ತು ಲಿಂಗುವಿನ ಅಲಂಕಾರ ಮಾಡಿದ್ದೆವು. ಈ ಬಾರಿ ಕಪ್ಪು, ತಾಮ್ರವರ್ಣದ ಅಂಲಕಾರ ಮಾಡಿದ್ದೇವೆ. ಎರಡು ದಿನ ವಿಗ್ರಹ ಪ್ರತಿಷ್ಠಾಪನೆ ಇರುತ್ತದೆ. ಆದರೆ ಅಲಂಕಾರ ಮಾತ್ರ ಮುಂದಿನ ವರಮಹಾಲಕ್ಷ್ಮಿ ಹಬ್ಬದ ವರೆಗೂ ಇರುತ್ತದೆ’ ಎಂದು ಮಾಹಿತಿ ನೀಡಿದರು.

ಹರ್ಷವರ್ಧಿನಿ ಹಬ್ಬದ ಸಿದ್ಧತೆಯನ್ನು ಎರಡು ತಿಂಗಳಿಂದಲೇ ಆರಂಭಿಸುತ್ತಾರೆ. ಮುಖ್ಯವಾಗಿ ದೇವರ ಕೋಣೆಯನ್ನು ಕುಸುರಿ ಕಲೆಯಲ್ಲಿ ಅಂದವಾಗಿ ಅಲಂಕರಿಸುತ್ತಾರೆ. ಅಲ್ಲಿನ ಪ್ರತಿಯೊಂದು ಅಲಂಕಾರವನ್ನೂ ಸ್ವತಃ ಅವರೇ ಮಾಡುತ್ತಾರಂತೆ.

‘ನಮ್ಮ ಮನೆಗೆ ಈ ಹಬ್ಬದಲ್ಲಿ ಕನಿಷ್ಠ 400 ಮಹಿಳೆಯರು ಬರುತ್ತಾರೆ’ ಎನ್ನುವರು ಗಾಂಧಿನಗರದ ಶೋಭಾ ಪ್ರಶಾಂತ್. ಅವರ ಮನೆಯ ದೇವರ ಕೋಣೆಯಲ್ಲಿ ವರಮಹಾಲಕ್ಷ್ಮಿಯನ್ನು ವೈಭವದಿಂದ ಅಲಂಕರಿಸಿದ್ದಾರೆ. ಪ್ರತಿ ವರ್ಷ ಸಹ ಅವರು ಒಂದೊಂದು ಬಗೆಯ ಅಲಂಕಾರ ಮಾಡುವರು. ಈ ಬಾರಿ ಆಮೆಯ ಅಲಂಕಾರ ದೇವರ ಕೋಣೆ ತುಂಬಿದೆ.

‘ನಮ್ಮ ಮನೆಯಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ನಮಗೆ ಗೊತ್ತಿಲ್ಲದಿದ್ದ ಕೆಲವರು ಸಹ ಅಲಂಕಾರ ನೋಡಲು ಬರುತ್ತಾರೆ’ ಎನ್ನುತ್ತಾರೆ ಶೋಭಾ.

ಹಬ್ಬದ ಸಂಭ್ರಮ ಹೊದ್ದ ಮನೆಗಳಲ್ಲಿ ಹೊಸಬಟ್ಟೆ ತೊಟ್ಟು ಚಿಕ್ಕಮಕ್ಕಳು ಲಘುಬಗೆಯಲ್ಲಿ ಓಡಾಟ ನಡೆಸಿದ್ದರು. ಹೆಣ್ಣು ಮಕ್ಕಳ ಹಬ್ಬ ಎನ್ನುವ ರೀತಿಯಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಹಬ್ಬದ ಸಡಗರದಲ್ಲಿ ಮಿಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.