ತುಮಕೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿ ಸಮೀಕ್ಷೆ) ಸಮಯದಲ್ಲಿ ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಬರೆಸುವಂತೆ ಜಿಲ್ಲೆಯ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಜಾತಿ ಸಮೀಕ್ಷೆಯಲ್ಲಿ ತಮ್ಮ ಉಪಜಾತಿಗಳನ್ನು ದಾಖಲಿಸುವುದು ಬಹಳ ಮುಖ್ಯವಾಗುತ್ತದೆ. ಪ್ರಸ್ತುತ ನಡೆಸುತ್ತಿರುವ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲ ವೀರಶೈವ ಲಿಂಗಾಯತ ಸಮಾಜದವರು ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಹಾಗೂ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ತಪ್ಪದೇ ನಮೂದು ಮಾಡಿಸಬೇಕು ಎಂದು ಸಲಹೆ ಮಾಡಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡ ಕೋರಿ ಮಂಜುನಾಥ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧರ್ಮವು ಸೂಕ್ಷ್ಮ ವಿಷಯವಾಗಿದ್ದು, ನಮ್ಮ ಸಮುದಾಯದ ಜನರು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಬೇಕು. ರಾಜ್ಯದಲ್ಲಿ ನಡೆಸುತ್ತಿರುವ ಜಾತಿ ಜನ ಗಣತಿಯಲ್ಲಿ ನಮ್ಮ ಸಮುದಾಯವನ್ನು ಹಲವು ಪಂಗಡಗಳಾಗಿ ವಿಂಗಡಣೆ ಮಾಡಲಾಗಿದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಜಾತಿ ಹೆಸರು ಬರೆಸಬೇಕು’ ಎಂದು ಹೇಳಿದರು.
‘ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಲಿಂಗಾಯತ ಹಾಗೂ ವೀರಶೈವ ಸಮುದಾಯ ಒಂದೇ. ಇವು ಎರಡು ಪ್ರತ್ಯೇಕ ಜಾತಿಗಳಲ್ಲ’ ಎಂದು ಹೇಳಿದ್ದರು. ಇಂದಿಗೂ ಅದೇ ತತ್ವವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅನಾದಿಕಾಲದಿಂದಲೂ ಧಾರ್ಮಿಕವಾಗಿ ವೀರಶೈವ ಹಾಗೂ ಲಿಂಗಾಯತ ಸಮುದಾಯಗಳು ಸಮಾಜದಲ್ಲಿ ಮಹತ್ವವನ್ನು ಉಳಿಸಿಕೊಂಡು ಬಂದಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾಯತ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವೀರಶೈವ ಎಂದು ಕರೆಯಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನೇಕ ಒಳ ಪಂಗಡಗಳಿವೆ. ಇವುಗಳಲ್ಲಿ ಜನಸಂಖ್ಯೆಯ ಪೈಪೋಟಿಯಿಂದಾಗಿ ಇದೀಗ ಕೆಲವರು ರಾಜಕೀಯ ಬಣ್ಣವನ್ನು ಬಳಿಯಲು ಹೊರಟಿದ್ದಾರೆ. ಇದು ಶೋಭೆ ತರುವ ವಿಚಾರವಲ್ಲ. ಇಂತಹ ಗೊಂದಲಗಳನ್ನು ಬದಿಗಿಟ್ಟು ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿ, ಒಳಿತಿಗಾಗಿ ದುಡಿಯಬೇಕಾಗಿದೆ ಎಂದು ಸಲಹೆ ಮಾಡಿದರು.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಪ್ರಸ್ತುತ 130ಕ್ಕೂ ಹೆಚ್ಚು ಉಪ ಪಂಗಡಗಳಿವೆ. ನೊಳಂಬ ಲಿಂಗಾಯತರೂ ಸಹ ವೀರಶೈವ ಲಿಂಗಾಯತ ಸಮುದಾಯದ ಅಡಿಯಲ್ಲಿ ಬರುತ್ತದೆ. ಇದರಂತೆ ಅನೇಕ ಉಪ ಪಂಗಡಗಳು ಇವೆ ಎಂದರು.
ಸಮುದಾಯದ ಪ್ರಮುಖರಾದ ಟಿ.ಬಿ.ಹರೀಶ್, ಸಿದ್ಧಲಿಂಗಮೂರ್ತಿ, ಕೆ.ಜೆ.ರುದ್ರಪ್ಪ, ಟಿ.ಸಿ.ಓಹಿಲೇಶ್ವರ, ಬಿ.ಎಸ್.ಮಂಜುನಾಥ್, ಟಿ.ಆರ್.ಸದಾಶಿವಯ್ಯ, ಸಿದ್ಧಲಿಂಗಸ್ವಾಮಿ, ಶಶಿಧರ್, ಜಿ.ಕೆ.ಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.