ADVERTISEMENT

ಕೊರಟಗೆರೆ | ದೇಗುಲದ ಜಮೀನು ಮಾರಾಟ: ಪ್ರತಿಭಟನೆ

ನಕಲಿ ದಾಖಲೆ ಸೃಷ್ಟಿ: ತೊಗರಿಘಟ್ಟ ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:01 IST
Last Updated 31 ಮೇ 2025, 14:01 IST
ದೇವಾಲಯದ ಇನಾಮ್ತಿ ಜಮೀನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ತೊಗರಿಘಟ್ಟ ಗ್ರಾಮಸ್ಥರು ತಹಶೀಲ್ದಾರ್ ಕೆ.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು
ದೇವಾಲಯದ ಇನಾಮ್ತಿ ಜಮೀನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ತೊಗರಿಘಟ್ಟ ಗ್ರಾಮಸ್ಥರು ತಹಶೀಲ್ದಾರ್ ಕೆ.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು   

ಕೊರಟಗೆರೆ: ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿಯ ತೊಗರಿಘಟ್ಟ ದೇವಸ್ಥಾನಕ್ಕೆ ಸಂಬಂಧಿಸಿದ ಇನಾಮ್ತಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತೊಗರಿಘಟ್ಟ ಗ್ರಾಮದ 4.6 ಎಕರೆ ಜಮೀನನ್ನು ಗ್ರಾಮದ ಚಲುವಚನ್ನಿಗರಾಯ ಸ್ವಾಮಿ ದೇವಾಲಯಕ್ಕೆ ಹಲವು ವರ್ಷಗಳ ಹಿಂದೆ ಇನಾಮ್ತಿ ನೀಡಲಾಗಿತ್ತು. ಈ ಭೂಮಿಯನ್ನು ದೇವಾಲಯ ಪೂಜಾರಿಕೆ ಮಾಡುವವರು ಬೇಸಾಯ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು.

25 ವರ್ಷಗಳ ಹಿಂದೆ ದೇವಾಲಯ ಪೂಜಾರಿಕೆ ಮಾಡುತ್ತಿದ್ದ ಶ್ರೀರಂಗಮೂರ್ತಿ ಅವರು ಈ ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಹಾಗಾಗಿ ಅವರನ್ನು ಪೂಜಾರಿಕೆಯಿಂದ ಗ್ರಾಮಸ್ಥರು ತೆಗೆದು ಹಾಕಿದ್ದರು. ಜಮೀನು ಬೇರೆಯವರಿಗೆ ಮಾರಾಟ ಮಾಡದಂತೆ ಗ್ರಾಮಸ್ಥರು ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದರು.

ADVERTISEMENT

ಶ್ರೀರಂಗಮೂರ್ತಿ ಅವರು ಈಗ ಮರಣ ಹೊಂದಿದ್ದಾರೆ. 25- 30 ವರ್ಷಗಳ ನಂತರ ಶ್ರೀರಂಗಮೂರ್ತಿ ಅವರ ಪತ್ನಿ ಸುಶೀಲಮ್ಮ ಅವರ ಮಗ ನರಸಿಂಹಮೂರ್ತಿ ದೇವಸ್ಥಾನದ ಜಮೀನನ್ನು ತನ್ನ ತಾಯಿ ಹೆಸರಿಗೆ ಖಾತೆ ಮಾಡಿಸಿ ನ್ಯಾಯಾಲಯದಲ್ಲಿ ದಾವೆ ಇರುವಾಗಲೇ ಮಾರಾಟ ಮಾಡಿದ್ದಾರೆ. ಕೊರಟಗೆರೆ ತಾಲ್ಲೂಕಿಗೆ ಸಂಬಂಧಿಸಿದ ಜಮೀನನ್ನು ಕುಣಿಗಲ್‌ನ ನೋಂದಣಿ ಕಚೇರಿಯಲ್ಲಿ ಬೇರೆಯವರಿಗೆ ನೋಂದಣಿ ಮಾಡಲಾಗಿದೆ. ಜೊತೆಗೆ ಪಹಣಿಯಲ್ಲಿ ದಾವೆ ಸಂಬಂಧಿಸಿದಂತೆ ದಾಖಲು ನಮೂದಾಗಿದ್ದರೂ ಅದನ್ನು ಏಕಾಏಕಿ ವಜಾ ಮಾಡಿ ದಾಖಲಾತಿ ನಕಲು ಮಾಡಿ ಮಾರಾಟ ಮಾಡಲಾಗಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ದೇವಾಲಯದ ಜಮೀನು ಬೇರೆಯವರಿಗೆ ಮಾರಾಟವಾಗಿರುವುದು ಕಂಡು ಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮಸ್ಥರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ‘ದೇವಾಲಯದ ಜಮೀನು ಮಾರಾಟದಲ್ಲಿ ಅಧಿಕಾರಿಗಳ ಕೈವಾಡ ಇದ್ದು, ನಕಲಿ ದಾಖಲೆ ಸೃಷ್ಟಿಗೆ ಅವರು ಕೈಜೋಡಿಸಿ ಮಾರಾಟಕ್ಕೆ ಸಹಕರಿಸಿದ್ದಾರೆ’ ಎಂದು ಆರೋಪಿಸಿ ಪ್ರತಿಭಟಿಸಿದರು.

ಕೂಡಲೇ ಬೇರೆಯವರಿಗೆ ನೋಂದಣಿಯಾಗಿರುವುದನ್ನು ರದ್ದುಪಡಿಸಿ ದೇವಾಲಯದ ಜಾಗವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಮೂರ್ತಣ್ಣ, ಸಿದ್ದಲಿಂಗಪ್ಪ, ಗ್ರಾಮಸ್ಥರಾದ ನಾರಾಯಣಪ್ಪ, ಸಂಜೀವರೆಡ್ಡಿ, ಗೋವಿಂದರಾಜು, ಪಾಪಣ್ಣ, ಮಂಜುನಾಥ್ ಹಾಜರಿದ್ದರು.

ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
- ಕೆ. ಮಂಜುನಾಥ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.