ADVERTISEMENT

ವೈರಾಣು ಜ್ವರ: ತುರ್ತು ಚಿಕಿತ್ಸೆ ಅಗತ್ಯ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:34 IST
Last Updated 23 ಸೆಪ್ಟೆಂಬರ್ 2021, 3:34 IST

ತುಮಕೂರು: ರೋಗ ಗುಣಪಡಿಸುವುದಾಗಿ ಪೂಜೆ, ಪುನಸ್ಕಾರ, ಮಾಟ, ಮಂತ್ರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಸಿದರು.

ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಯಲ್ಲಿ ಬುಧವಾರ ಮಾತನಾಡಿ, ‘ಗ್ರಾಮೀಣ, ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ವೈರಲ್ ಜ್ವರ ಕಂಡುಬರುತ್ತಿದ್ದು, ಜ್ವರ ತಗುಲಿದ ಬಹುತೇಕ ಮಕ್ಕಳು ಮರಣ ಹೊಂದುವ ಸಾಧ್ಯತೆಗಳಿವೆ. ಆದ್ದರಿಂದ ಜ್ವರ ಕಂಡು ಬಂದ ತಕ್ಷಣ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಬಹುತೇಕರು ವೈದ್ಯಕೀಯ ಚಿಕಿತ್ಸೆ ನಿರ್ಲಕ್ಷಿಸಿ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಗುಣಪಡಿಸಲು ದೇವಸ್ಥಾನಗಳ ಮೊರೆ ಹೋಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರೋಗ ಗುಣಪಡಿಸಲು ದೇವಸ್ಥಾನಗಳಿಗೆ ಹೋಗದೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಮೌಢ್ಯತೆಯಿಂದ ರೋಗ ಗುಣಪಡಿಸುವ ಪ್ರಸಂಗಗಳು ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಆರೋಗ್ಯಾಧಿಕಾರಿಗೆ ಮಾಹಿತಿ ಒದಗಿಸಿ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಜಿಲ್ಲೆಯಲ್ಲಿ ಹರಡುವ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಲೇರಿಯಾ, ಚಿಕುನ್ ಗುನ್ಯಾ, ಡೆಂಗ್ಯೂ, ಕ್ಷಯರೋಗ, ಮೆದುಳು ಜ್ವರ ಸೇರಿದಂತೆ ಹಲವು ಮಾರಣಾಂತಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಬೇಕು
ಎಂದರು.

ತಗ್ಗಿದ ಮಲೇರಿಯಾ: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 3 ಮಲೇರಿಯಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಡೆಂಗ್ಯೂ 71, ಚಿಕುನ್‍ ಗುನ್ಯಾ 77 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.

ನಾಯಿ ಕಾಟ: ನಗರ, ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೋಳಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ನಗರ ಪ್ರದೇಶದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು. 3 ವಾರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಡಿಎಚ್ಒ ಡಾ.ಕೆ.ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.