ADVERTISEMENT

ಸುಂದರ ಜಗತ್ತಿಗಿದೆ ವಿಶ್ವಕರ್ಮರ ಕೊಡುಗೆ

ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:02 IST
Last Updated 17 ಸೆಪ್ಟೆಂಬರ್ 2019, 20:02 IST
ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ತುಮಕೂರು: ದೇಶದಲ್ಲಿನ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಹೆಚ್ಚಿದೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.

ವಿಶ್ವಕರ್ಮ ಸಮುದಾಯುವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವಕರ್ಮ ಜಯಂತಿ’ಯಲ್ಲಿ ಅವರು ಮಾತನಾಡಿದರು.

ಅಜಂತಾ, ಎಲ್ಲೋರಾ, ಐಹೊಳೆ, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಹಲವಾರು ದೇವಾಲಯಗಳನ್ನು ಕೆತ್ತನೆ ಮಾಡುವ ಮೂಲಕ ವಿಶ್ವಕರ್ಮ ಶಿಲ್ಪಿಗಳು ದೇಶಕ್ಕೆ ಕಲಾ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾಡಳಿತದಿಂದ ಜಯಂತಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಜಯಂತಿಯಲ್ಲಿ ಅಧಿಕಾರಿಗಳುವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌, ವಿಶ್ವಕರ್ಮ ಸಮುದಾಯದವರು ಕಾಯಕ ನೈಪುಣ್ಯತೆ ಹಾಗೂ ಕೌಶಲದ ಚಾಕಚಕ್ಯತೆಯಿಂದ ಹಲವಾರು ಕೊಡುಗೆ ನೀಡಿದ್ದಾರೆ. ಕೈಯಿಂದಲೇ ಕಲ್ಲಿಗೆ ರೂಪ ನೀಡುವ ಶಕ್ತಿ ಹೊಂದಿದ್ದಾರೆ. ಅವರ ಕಲಾಕೃತಿಗಳಿಂದ ಇಂದು ನಾವೆಲ್ಲರೂ ಸುಂದರ ಜಗತ್ತನ್ನು ನೋಡುತ್ತಿದ್ದೇವೆ ಎಂದು ಅವರು ಶ್ಲಾಘಿಸಿದರು.

ನೀಲಕಂಠ ಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮಾಜದವರು ಹುಟ್ಟಿನಿಂದ ಸಾಯುವವರೆಗೂ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ದೇವಕುಲಕ್ಕೆ ಆಯುಧಗಳನ್ನು ಮಾಡಿಕೊಟ್ಟವರು ವಿಶ್ವಕರ್ಮರು. ಎಲ್ಲ ಸಮುದಾಯಗಳು ಜಾತಿಭೇದ ಇಲ್ಲದೆ ಸಹಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು.

ಎಸ್ಪಿ ಕೆ.ವಂಶಿಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಸುರೇಶ್, ವಿಶ್ವಕರ್ಮ ಸಮಾಜದ ಮುಖಂಡರಾದ ನಾಗರಾಜ್, ರವಿ, ಗೋಪಾಲಕೃಷ್ಣ ಆಚಾರ್‌, ಶಶಿಧರ್, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.