ADVERTISEMENT

ಜಿಲ್ಲೆಯ ಹಿತಾಸಕ್ತಿಗೆ ಮತದಾರ ಸ್ಪಂದನೆ

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:22 IST
Last Updated 24 ಮೇ 2019, 20:22 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: 'ದೇವೇಗೌಡರಂತಹ ನಾಯಕರ ಸೋಲು ವೈಯಕ್ತಿಕವಾಗಿ ನೋವು. ಅವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುಳಿವು ತಿಳಿದಾಗಲೇ ಅವರು ತಪ್ಪು ನಿರ್ಧಾರ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಜಿಲ್ಲೆಯ ಹಿತಾಸಕ್ತಿಗೆ ಸ್ಪಂದಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದಾರೆ' ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮತ ಎಣಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯ ಜನರು ಪ್ರಬುದ್ಧರಾಗಿದ್ದಾರೆ. ದೇವೇಗೌಡರು ಜಿಲ್ಲೆಗೆ ಮಾಡಿದ ಮೋಸವನ್ನು ಜನರು ನೆನಪು ಮಾಡಿಕೊಂಡು ಚುನಾವಣೆಯಲ್ಲಿ ಅದಕ್ಕೆ ಉತ್ತರಿಸಿದ್ದಾರೆ' ಎಂದು ಹೇಳಿದರು.

‘ರಾಜಕಾರಣದಲ್ಲಿ ಜಾತಿಗೆ ಬೆಲೆ ಇಲ್ಲ ಎಂಬುದನ್ನು ತುಮಕೂರು, ಮಂಡ್ಯದಲ್ಲಿ ಜನ ತೋರಿಸಿದ್ದಾರೆ. ಜಾತಿ ರಾಜಕಾರಣ ನಡೆಯುವುದಿಲ್ಲ. ದೇವೇಗೌಡರು, ಅವರ ಕುಟುಂಬದವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಪಕ್ಷಾತೀತವಾಗಿ ಸಹಾಯ ಮಾಡಿದ್ದಾರೆ. ಜೀವದ ನೆಲೆ, ಸೆಲೆ ಉಳಿಸುವ ಭರವಸೆಯಿಂದ ಬಿಜೆಪಿ ಗೆಲ್ಲಿಸಿದ್ದಾರೆ. ಜನರು ಹೋರಾಟ ಕೇಳ್ತಾರೆ. ನಮ್ಮ ಜವಾಬ್ದಾರಿ ಜಾಸ್ತಿಯಾಗಲಿದೆ. ನಾನು ಹಿರಿಯ ಶಾಸಕನಾಗಿ ಜವಾಬ್ದಾರಿ ವಹಿಸುತ್ತೇನೆ’ ಎಂದು ತಿಳಿಸಿದರು.

‘ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇವೆ. ಜಿಲ್ಲೆಯ ಜನರ ಋಣ ತೀರಿಸಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು. ನೈಜ ಪ್ರಜಾಪ್ರಭುತ್ವ ಆರಂಭವಾಗಲಿ. ಬಿಜೆಪಿ ಮೇಲೆ ವಿಶ್ವಾಸವಿಟ್ಟು ಜನ ಮತ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳ ಅನೈತಿಕ ಸಂಬಂಧ ಬಯಲಾಗಿದೆ’ ಎಂದರು.

ಮೊದಲೇ ಗೊತ್ತಿತ್ತು: ‘ಚಿಕ್ಕನಾಯಕನಹಳ್ಳಿ, ತುರುವೇಕೆರೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬರುವುದು ಕಷ್ಟ ಎಂಬುದು ಗೊತ್ತಿತ್ತು. ಇದನ್ನು ಮೊದಲೇ ಹೇಳಿದ್ದೆ. ಆದಾಗ್ಯೂ ಸಹ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಲಭಿಸಿದ ಮತಗಳಿಗಿಂತ ಹೆಚ್ಚಿನ ಮತಗಳು ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಲಭಿಸಿವೆ’ ಎಂದು ಹೇಳಿದರು.

ಸಿದ್ಧರಾಮಯ್ಯ ಎಚ್ಚೆತ್ತುಕೊಳ್ಳಲಿ: ‘ನನ್ನ ಸ್ನೇಹಿತ ಸಿದ್ದರಾಮಯ್ಯ ಮೋದಿ ಬಗ್ಗೆ‌ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಜನಾಭಿಪ್ರಾಯದ ವಿರುದ್ಧವಾಗಿರುವ ಸರ್ಕಾರವನ್ನು ಜನರು ಸಹಿಸಿಲ್ಲ’ ಎಂದರು.

‘ಇನ್ನು ಮುಂದೆ ಹೇಮಾವತಿ ನೀರಿನ ವಿಷಯದಲ್ಲಿ ಮೋಸ ಮಾಡಲು ಯಾರಿಂದಲು ಸಾಧ್ಯವಿಲ್ಲ. ನ್ಯಾಯಾಧೀಕರಣ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.