ಪ್ರಜಾವಾಣಿ ವಾರ್ತೆ
ತಿಪಟೂರು: ಶಿಕ್ಷಣ ಎಂಬುದು ಜೀವಮಾನದ ಅನ್ವೇಷಣೆಯಾಗಿದ್ದು, ಪ್ರತಿಯೊಂದು ಅನುಭವವೂ ಒಂದೊಂದು ಪಾಠ. ಕುತೂಹಲ, ಸಹಾನುಭೂತಿ, ಸಮಾನತೆ ಮತ್ತು ಒಳಗೊಳ್ಳುವಿಕೆಯ ಆದರ್ಶಗಳಿಗೆ ಬದ್ಧರಾಗಿದ್ದು, ಬುದ್ಧಿಶಕ್ತಿ ಬೆಳಗುತ್ತಾ, ಕೌಶಲ ವೃದ್ಧಿಸಿಕೊಳ್ಳಬೇಕಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್ ಎಸ್. ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಪದವೀಧರರಿಗೆ ಪದವಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಕೌಶಲ, ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಸಾಮರ್ಥ್ಯ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ವಿಟಿಯು ಆಡಳಿತ ಮತ್ತು ಪರೀಕ್ಷಾ ಕೇಂದ್ರಿತಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿ ಕೇಂದ್ರಿತವಾಗಿದೆ ಎಂದರು.
ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಿದ್ದು, 12 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದಾರೆ. ಯಾವ ಹುದ್ದೆಯಲ್ಲಿದ್ದರೂ ಮೊದಲು ಮಾನವನಾಗಿ ದೇಶಪ್ರೇಮಿಯಾಗಿ ಕರ್ತವ್ಯ ನಿರ್ವಹಿಸಿದಾಗ ಗೌರವ ಸಿಗುತ್ತದೆ ಎಂದು ಹೇಳಿದರು.
ವಿಟಿಯು ಶೈಕ್ಷಣಿಕ ಸೆನೆಟ್ ಸದಸ್ಯ ಎಚ್.ಬಿ. ಬಾಲಕೃಷ್ಣ ಮಾತನಾಡಿ, ಕಲ್ಪತರು ತಾಂತ್ರಿಕ ವಿದ್ಯಾಲಯ ಉನ್ನತ ಕ್ಯಾಂಪಸ್ ಹೊಂದಿದೆ. ನುರಿತ ತಜ್ಞರೊಂದಿಗೆ ಶಿಕ್ಷಣ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ 10ನೇ ರ‍್ಯಾಂಕ್ ಗಳಿಸಿದ ಶೃತಿ ಎಚ್.ಎಂ ಹಾಗೂ ಐವರು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. 315 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಖಜಾಂಚಿ ಟಿ.ಎಸ್.ಶಿವಪ್ರಸಾದ್, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶ್‌ಮೂರ್ತಿ, ಎಚ್.ಜಿ.ಸುಧಾಕರ್, ಪ್ರಾಂಶುಪಾಲ ಎಚ್.ಸಿ.ಸತೀಶ್‌ಕುಮಾರ್, ಗುರುಮೂರ್ತಿ, ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.