ಹುಳಿಯಾರು: ಪಟ್ಟಣ ಪಂಚಾಯಿತಿ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದ ಕಾರಣ ಪಟ್ಟಣದಲ್ಲಿ ಕಸದ ಬಿಕ್ಕಟ್ಟು ಆಗಾಗ್ಗೆ ಉಲ್ಬಣಗೊಳ್ಳುತ್ತಿದೆ.
ತೊರೆಸೂರಗೊಂಡನಹಳ್ಳಿ, ತಿಪಟೂರು, ಹೊಸದುರ್ಗ, ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ರಸ್ತೆಗಳು ಹಿಗ್ಗುತ್ತಿವೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಕಟ್ಟಡ, ಕಾರ್ಖಾನೆ ಸೇರಿದಂತೆ ವಿವಿಧ ರೀತಿಯ ಮಳಿಗೆ ಹಾಗೂ ಮಾಲ್‌ಗಳು ತಲೆ ಎತ್ತುತ್ತಿವೆ. ಪ್ರಮುಖ ವಾಣಿಜ್ಯ ಕೇಂದ್ರ ಅಲ್ಲದೆ ಐದಾರು ಜಿಲ್ಲೆಗಳನ್ನು ಸಂದಿಸುವ ಕೇಂದ್ರ ಬಿಂದು ಕೂಡ ಆಗಿರುವ ಕಾರಣ ಬಂದು ಹೋಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಿದ್ದು ಬಿಟ್ಟರೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸದಿರುವುದು ಅವಾಂತರಗಳಿಗೆ ಕಾರಣವಾಗಿದೆ.
ಮೊದಲಿನಿಂದಲೂ ಪಟ್ಟಣದಲ್ಲಿ ಬರುವ ಕಸವನ್ನು ಕೆರೆ ಸೇರಿದಂತೆ ಕೆಲ ರಸ್ತೆ ಬದಿ ಸುರಿದು ಕೈ ತೊಳೆದುಕೊಳ್ಳುತ್ತಿತ್ತು. ಆದರೆ ಕಸ ಹೆಚ್ಚಾದ ನಂತರ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ಸರ್ಕಾರಿ ಜಮೀನಿನಲ್ಲಿ ಸುರಿಯಲು ಆರಂಭಿಸಿದರು. ಮೊದಲು ಗಾಣಧಾಳು ಗ್ರಾಮ ಪಂಚಾಯಿತಿಯ ಸೋಮನಹಳ್ಳಿ ಕೆರೆ ಸಮೀಪ ಸುರಿಯಲಾಗುತ್ತಿತ್ತು. ಅಲ್ಲಿ ವಿರೋಧ ವ್ಯಕ್ತವಾದ ನಂತರ ಹುಳಿಯಾರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಲಶುದ್ಧೀಕರಣ ಘಟಕದಲ್ಲಿ ಸುರಿದು ಬೆಂಕಿ ಹಚ್ಚಲಾಗುತ್ತಿತ್ತು. ಅಲ್ಲೂ ವಿರೋಧ ವ್ಯಕ್ತವಾದ ನಂತರ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆಂಕೆರೆ ಸಮೀಪ ಸರ್ಕಾರಿ ಜಮೀನು ಗುರ್ತಿಸಿ ಈ ಹಿಂದೆ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಭೂಮಿಪೂಜೆ ಕೂಡ ನೆರವೇರಿಸಿದ್ದರು. ಆದರೆ ಅಲ್ಲೂ ವಿರೋಧ ವ್ಯಕ್ತವಾದ ನಂತರ ಯೋಜನೆ ನಿಂತು ಹೋಯಿತು.
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಕಸದ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಜನನಿಬಿಡ ಪ್ರದೇಶಗಳು ಕಸದ ರಾಶಿಯಿಂದ ದುರ್ಗಂಧ ಹರಡುವ ಕೇಂದ್ರಗಳಾಗುತ್ತಿವೆ. 15 ದಿನಗಳ ಹಿಂದೆ ಪಟ್ಟಣದಲ್ಲಿ ಕಸ ವಿಲೇವಾರಿ ಆಗದೆ ರಸ್ತೆ ಪಕ್ಕ ಎಲ್ಲೆಡೆ ಕಸದರಾಶಿ ಕಂಡು ಬಂದಿತ್ತು. ಪೌರಕಾರ್ಮಿಕರು ಮನೆಮನೆಗೆ ತೆರಳಿ ಸಂಗ್ರಹಿಸಿದ ಕಸದ ಚೀಲಗಳನ್ನು ರಸ್ತೆ ಪಕ್ಕವೇ ಬಿಟ್ಟಿದ್ದರು. ಅಂಗಡಿಗಳ ತ್ಯಾಜ್ಯವೂ ಬೀದಿಗಳಲ್ಲಿ ಸುರಿದು, ಪಟ್ಟಣವೇ ಕಸದಿಂದ ಆವರಿಸಿಕೊಂಡಿತ್ತು.
ಟ್ರ್ಯಾಕ್ಟರ್ ವಶ: ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರ್‌ನಲ್ಲಿ ಕಸವನ್ನು ಕೆಂಕೆರೆ ಮಾರ್ಗದ ಕುದುರೆಕಣಿವೆ ಅರಣ್ಯ ಪ್ರದೇಶದಲ್ಲಿ ಸುರಿಸಲಾಗಿತ್ತು. ಅಲ್ಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ ಇಲಾಖೆ ಅಧಿಕಾರಿಗಳು ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಇದುವೆರೆಗೂ ಟ್ರಾಕ್ಟರ್ ಬಿಡುಗಡೆಯಾಗಿಲ್ಲ.
ಶಾಶ್ವತ ಸ್ಥಳವಿಲ್ಲ: ಪಟ್ಟಣ ಪಂಚಾಯಿತಿ ಸ್ಥಾಪನೆಯಾಗಿ ಏಳು ವರ್ಷವಾದರೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿಲ್ಲ. ಸರ್ಕಾರ ಕೆಲವೊಮ್ಮೆ ಜಾಗ ಗುರುತಿಸಿದರೂ, ಅಲ್ಲಿನ ನಿವಾಸಿಗಳ ಪ್ರತಿರೋಧ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಭೂಮಿ ಎಂಬ ಕಾರಣದಿಂದ ಕಾನೂನು ಸಂಘರ್ಷವಾಗಿತ್ತು. ತಾತ್ಕಾಲಿಕ ಪರಿಹಾರವಾಗಿ ಚಿಕ್ಕನಾಯಕನಹಳ್ಳಿಯ ತ್ಯಾಜ್ಯ ಘಟಕಕ್ಕೆ ಕಸ ಸಾಗಿಸಲು ಉಪ ವಿಭಾಗಾಧಿಕಾರಿ ಆದೇಶ ನೀಡಿದ್ದಾರೆ. ಆದರೆ, ಅಲ್ಲಿನ ಪುರಸಭೆ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಸ ವಿಲೇವಾರಿಗೆಂದು ಪಂಚಾಯಿತಿಯಿಂದ ಟ್ರಾಕ್ಟರ್, ಆಟೊ ಖರೀದಿಸಿದ್ದರೂ ಕಾಯಂ ಚಾಲಕರನ್ನು ನೇಮಿಸಿಲ್ಲ.
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಗ್ಗಂಟಾಗಿದ್ದು ತೊರೆಸೂರಗೊಂಡನಹಳ್ಳಿ ಬಳಿ ಸರ್ಕಾರಿ ಜಮೀನಿದ್ದು ಪರಿಶೀಲಿಸಲಾಗಿದೆ. ಶೀಘ್ರ ಸರ್ಕಾರದ ಗಮನಕ್ಕೆ ತಂದು ಘಟಕ ನಿರ್ಮಿಸಲಾಗುವುದು.ಮಂಜುನಾಥ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಆಗಿದ್ದು ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹಲವು ಬಾರಿ ಘಟಕ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.ರತ್ನಮ್ಮ ರೇವಣ್ಣ ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ತ್ಯಾಜ್ಯ ವಿಲೇವಾರಿ ಘಟಕ ಗುರುತಿಸದಿರುವುದು ಪ್ರಮುಖ ಸಮಸ್ಯೆಯಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ನಡುವೆ ಜಾಗದ ಹಕ್ಕುಗಳ ಕುರಿತು ಗೊಂದಲವಿದೆ. ಕೂಡಲೇ ಜಾಗ ಗುರ್ತಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು.ಪರಮೇಶ್ ಹುಳಿಯಾರು.
ಪಟ್ಟಣದ ಕಸವನ್ನು ಅರಣ್ಯ ಪ್ರದೇಶದಲ್ಲಿ ಸುರಿಯುವುದು ಅಪರಾಧ. ಪ್ರಾಣಿ-ಪಕ್ಷಿಗಳು ಕಸವನ್ನು ತಿಂದು ಸಾಯುತ್ತವೆ. ಜತೆಗೆ ಅರಣ್ಯದಲ್ಲಿ ಪ್ಲಾಸ್ಟಿಕ್ ಹಾಕುವುದು ಎಷ್ಟು ಸರಿ. ಹೊನ್ನಪ್ಪ ಕೆಂಕೆರೆ ಇತ್ತೀಚೆಗೆ ಪಟ್ಟಣದಲ್ಲಿ ಕಸದ ಸಮಸ್ಯೆ ಎದುರಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ತುರ್ತು ಕ್ರಮ ಜರುಗಿಸಬೇಕು.ಎಂ.ಮಹೇಂದ್ರ ಹುಳಿಯಾರು
ತಿಂಗಳಿಗೊಮ್ಮೆ ಇಡೀ ಪಟ್ಟಣವೇ ಗಬ್ಬೆದ್ದು ನಾರುತ್ತಿದ್ದು ಗ್ರಾಹಕರೂ ಅಂಗಡಿಗಳಿಗೆ ಬರಲು ಬೇಸರಿಸುತ್ತಿದ್ದು ಇದರಿಂದ ವ್ಯವಹಾರಕ್ಕೂ ಹಿನ್ನಡೆಯಾಗುತ್ತಿದೆ.ಪ್ರದೀಪ್ ಹುಳಿಯಾರು.
ವಿಭಾಗಾಧಿಕಾರಿ ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿ ತ್ಯಾಜ್ಯ ಘಟಕದಲ್ಲಿ ಕಸ ಸುರಿಯಲು ಆದೇಶ ನೀಡಿದ್ದಾರೆ. ಪುರಸಭೆ ಸಭೆಯಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. 25 ಕಿ.ಮೀ ಕಸ ಸಾಗಣೆ ಮಾಡಲು ಹೆಚ್ಚು ಖರ್ಚಾಗುತ್ತದೆ.ಮಹ್ಮದ್ ಹುಸೇನ್ ಗುಂಡ ಚಿ.ನಾ.ಹಳ್ಳಿ ಪುರಸಭೆ ನಾಮನಿರ್ದೇಶಿತ ಸದಸ್ಯ
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.