ಕೊರಟಗೆರೆ: ಪಟ್ಟಣದಾದ್ಯಂತ ಕುಡಿಯುವ ನೀರಿನ ಅಭಾವ ದಿನೇ, ದಿನೇ ಹೆಚ್ಚಾಗುತ್ತಿದ್ದು, ಜನರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.
ಬಿಸಿಲ ಬೇಗೆ ಹಾಗೂ ನೀರಿನ ಸಮಸ್ಯೆ ಜನರನ್ನು ಹೈರಾಣಾಗಿಸಿದೆ. ಎರಡು ವರ್ಷಗಳ ಹಿಂದಷ್ಟೇ ತಾಲ್ಲೂಕಿನ ಜೀವನದಿಗಳಾದ ಸುವರ್ಣಮುಖಿ, ಜಯಮಂಗಲಿ, ಗರುಡಾಚಲ ಮೈದುಂಬಿ ಹರಿದಿದ್ದವು. ತಾಲ್ಲೂಕಿನ ದೊಡ್ಡಕೆರೆಗಳಾದ ಮಾವತ್ತೂರು, ತೀತಾ ಡ್ಯಾಂ, ಚಿಕ್ಕಾವಳಿ ಸೇರಿದಂತೆ ತಾಲ್ಲೂಕಿನ ಎಲ್ಲ ಕೆರೆಕಟ್ಟೆ ತುಂಬಿ ಕೋಡಿ ಹರಿದಿದ್ದವು. ಈಗ ಬತ್ತಿ ಹೋಗಿವೆ.
ನೀರಿನ ಸಮಸ್ಯೆ ಪಟ್ಟಣಕ್ಕೆ ಸೀಮಿತವಾಗಿಲ್ಲ. ತಾಲ್ಲೂಕಿನ ಹಲವು ಕಡೆಗಳಲ್ಲಿ ರೈತರ ಕೊಳವೆ ಬಾವಿ ಸೇರಿದಂತೆ ಕುಡಿಯುವ ನೀರಿನ ಕೊಳವೆ ಬಾವಿಗಳು ಇದ್ದಕ್ಕಿದಂತೆ ಒಣಗಲಾರಂಭಿಸಿವೆ. ರೈತರಿಗೆ ತೋಟದ ರಕ್ಷಣೆಯೇ ಸವಾಲಾಗಿದೆ. ಕೆಲವೆಡೆ ರೈತರು ಈಗಾಗಲೇ ಸಾವಿರಾರು ರೂಪಾಯಿ ಕೊಟ್ಟು ಟ್ಯಾಂಕರ್ ಮೂಲಕ ತೋಟಗಳಿಗೆ ನೀರು ಹಾಯಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ವಾರದಲ್ಲಿ ಮಳೆ ಬಾರದಿದ್ದರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ.
ಪಟ್ಟಣದಲ್ಲಿ ಈಗಾಗಲೇ ನೀರಿನ ಹಾಹಾಕಾರ ಹೆಚ್ಚಾಗಿದೆ. ಪಟ್ಟಣಕ್ಕೆ ನೀರುಣಿಸುತ್ತಿದ್ದ ಜಂಪೇನಹಳ್ಳಿ ಕೆರೆ ಬತ್ತಿದೆ. ಈಗಿರುವ ನೀರಿನ ಮೂಲಗಳಿಂದ ಏಳು ದಿನಕ್ಕೊಮ್ಮೆ ಒಂದೊಂದು ವಾರ್ಡ್‌ನ ಭಾಗಗಳಿಗೆ ನೀರು ಬಿಡಲಾಗುತ್ತಿದೆ. ಕೆಲವೊಮ್ಮೆ ಕೆಲವು ಭಾಗಗಳಿಗೆ 10ರಿಂದ 15 ದಿನಗಳಿಗೊಮ್ಮೆ ನೀರು ಹರಿಸಲಾಗುತ್ತಿದೆ.
ಪಟ್ಟಣಕ್ಕೆ ಬಹುತೇಕವಾಗಿ ಕುಡಿಯುವ ನೀರು ಒದಗಿಸುತ್ತಿದ್ದ ಕೋಟೆಯಲ್ಲಿನ ಸಿಹಿ ನೀರಿನ ಬಾವಿಯಲ್ಲೂ ನೀರಿನ ಕೊರತೆ ಉಂಟಾಗಿದೆ.
ಪಟ್ಟಣದಲ್ಲಿನ ಬಹುತೇಕ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. ಕೆಲವೆಡೆ ನೀರಿನ ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಹೊರೆತುಪಡಿಸಿ ಉಳಿದ ಕಡೆ ಬಹುತೇಕ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಪಟ್ಟಣ ವಾಸಿಗಳಿಗೆ ಶುದ್ಧ ನೀರು ಮರಿಚಿಕೆಯಾಗಿದೆ.
ಖಾಸಗಿ ಶುದ್ಧ ನೀರಿನ ಘಟಕದ ಬಳಿ ಜನರು ಕ್ಯಾನ್ ನೀರಿಗಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪಟ್ಟಣದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿಂದೆ ₹200ರಿಂದ ₹300ಕ್ಕೆ ನೀಡುತ್ತಿದ್ದ ಟ್ಯಾಂಕರ್ ನೀರು ಬೇಡಿಕೆ ಹೆಚ್ಚಾದಂತೆ ₹500ರಿಂದ ₹1,000 ತಲುಪಿದೆ.
ಪಟ್ಟಣದ ಪೇಟೆ ಬೀದಿ, ಲೋಕೋಪಯೋಗಿ ವಸತಿ ಗೃಹ, ಬೆಸ್ಕಾಂ ವಸತಿ ಗೃಹಗಳು, ಕುಂಬಾರ ಬೀದಿ, ಕಾಳಿದಾಸ ಬಡವಾಣೆ, ಹನುಮಂತಪುರ ಬಡಾವಣೆ, ವಿನಾಯಕ ನಗರ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ.
ಪಟ್ಟಣದಲ್ಲಿ ಐದು ಸಾವಿರಕ್ಕೂ ಹೆಚ್ಚು ಮನೆಗಳಿವೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣದ ಕುಡಿಯುವ ನೀರಿಗಾಗಿ 30 ಕೊಳವೆ ಬಾವಿಗಳಿವೆ. ಅದರಲ್ಲಿ ಈಗ 10ರಿಂದ 15 ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ.
ತಾಲ್ಲೂಕಿನ ಅಗ್ರಹಾರ ಕೆರೆಯಲ್ಲಿ 69 ಎಂಸಿಎಫ್‌ಟಿ ಹೇಮಾವತಿ ನೀರು ಸಂಗ್ರಹವಿದೆ. ಸದ್ಯಕ್ಕೆ ಪಟ್ಟಣದ ಜನ ಇದೇ ನೀರನ್ನು ಅವಲಂಬಿಸಿದ್ದಾರೆ. ಈ ನೀರನ್ನೆ ವಾರ, ಹತ್ತು ದಿನಗಳಿಗೊಮ್ಮೆ ಪಟ್ಟಣಕ್ಕೆ ಬಿಡಲಾಗುತ್ತಿದೆ. ಇನ್ನೂ ಮೂರು ತಿಂಗಳು ಪಟ್ಟಣಕ್ಕೆ ನೀರು ನಿರ್ವಹಣೆ ಮಾಡಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ವಾರ, ಹತ್ತು ದಿನಗಳಿಗೊಮ್ಮೆ ಬಿಡುತ್ತಿರುವ ನೀರು ಸಾಕಾಗುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ. ಕೆಲವೊಮ್ಮೆ ನೀರು ಪೋಲಾಗುತ್ತಿದೆ. ಕೆಲವೆಡೆ ರಾತ್ರಿ ಇಡೀ ಬಿಡುವ ಕಾರಣಕ್ಕೆ ಬೀದಿ ನಲ್ಲಿಗಳಲ್ಲಿ ನೀರು ಸುರಿದುಹೋಗುತ್ತವೆ. ನೀರಿನ ನಿರ್ವಹಣೆಯಲ್ಲಿ ಸಿಬ್ಬಂದಿ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಈ ನೀರು ಸಾಕಾಗುತ್ತಿಲ್ಲ. ಈ ಮಧ್ಯೆ ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಬೇಕಿದೆ. ಈಗ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿರುವ ಕಾರಣ ಅದೂ ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.ಅಶ್ವಕ್ ಹುಸೇನ್
ನಮ್ಮ ಭಾಗದಲ್ಲಿ ನೀರು ಯಾವಾಗ ಬಿಡುತ್ತಾರೆ ಎನ್ನುವುದೇ ಖಾತ್ರಿ ಇಲ್ಲ. ಅರ್ಧ ರಾತ್ರಿಯಲ್ಲಿ ಬಿಡುವುದೂ ಉಂಟು. ಬಿಟ್ಟಾಗ ಹಿಡಿದಿಟ್ಟುಕೊಳ್ಳಬೇಕು. ಇಲ್ಲವಾದರೆ ಮತ್ತೆ ವಾರ ಹದಿನೈದು ದಿನ ನೀರಿಗೆ ಕಷ್ಟ ಆಗುತ್ತದೆ. ನೀರಿಗಾಗಿ ಹಗಲು ರಾತ್ರಿ ಕಾಯಬೇಕಿದೆ.ಸಲ್ಮಾ ಬಾನು
ಸದ್ಯ ಟ್ಯಾಂಕರ್ ನೀರಿಗೆ ಬೇಡಿಕೆ ಬರುತ್ತಿದೆ. ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ನೀರು ಖರೀದಿ ಮಾಡಿ ಜನರಿಗೆ ಟ್ಯಾಂಕರ್‌ನಲ್ಲಿ ಒದಗಿಸುತ್ತೇವೆ. ಅಲ್ಲೂ ನೀರಿಗೆ ಗಂಟೆಗಟ್ಟಲೆ ಟ್ಯಾಂಕರ್ ನಿಲ್ಲಿಸಿಕೊಂಡು ಕಾಯಬೇಕಾಗಿದೆ. ಬೇಡಿಕೆಯಷ್ಟು ನೀರು ಒದಗಿಸಲಾಗುತ್ತಿಲ್ಲ.ಶ್ರೀನಿವಾಸ ಟ್ಯಾಂಕರ್ ಮಾಲೀಕ
ನಮ್ಮ ಮನೆಗೆ ಸಂಪು ಇಲ್ಲ. ಕೊಳಾಯಿಯಲ್ಲಿ ಬಂದಾಗಷ್ಟೆ ನೀರು ಹಿಡಿದಿಡಬೇಕು. ವಾರ ಹದಿನೈದು ದಿನಕ್ಕೆ ಬಿಡೋ ನೀರನ್ನು ಚಿಕ್ಕ ಮನೆಯಲ್ಲಿ ಸಂಗ್ರಹ ಮಾಡಿ ಇಡೋಕು ಆಗೋಲ್ಲ. ಕೆಲವು ಸಾರಿ ನೀರು ಸಿಗೋ ಕಡೆ ಬಿಂದಿಗೆಯಲ್ಲಿ ಹಿಡಿದುಕೊಂಡು ಬರುವಂತಾಗಿದೆ.ಚಿಕ್ಕತಿಮ್ಮಕ್ಕ
ಪ್ರತಿ ವರ್ಷ ಬೇಸಿಗೆಯಲ್ಲಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. ಪಟ್ಟಣಕ್ಕೆ ನೀರುಣಿಸುವ ಜಂಪೇನಹಳ್ಳಿ ಕೆರೆ ನೀರನ್ನು ಕಾಪಾಡಿಕೊಳ್ಳುವ ಹಾಗೂ ಕೆರೆ ನೀರು ಸೋರಿಕೆಯಾಗದಂತೆ ಅಭಿವೃದ್ಧಿಪಡಿಸಿದ್ದಲ್ಲಿ ಪಟ್ಟಣಕ್ಕೆ ಇಷ್ಟೊಂದು ಸಮಸ್ಯೆ ಆಗುವುದಿಲ್ಲ.ಭಾಗ್ಯಮ್ಮ
ಮಳೆ ಕೊರತೆಯಿಂದ ನೀರಿಗೆ ಸಮಸ್ಯೆಯಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಲಾಗಿದೆ. ನೀರು ಮೇವಿಗೆ ಕೊರತೆ ಉಂಟಾಗದಂತೆ ಮೇಲ್ವಿಚಾರಣೆ ಮಾಡುತ್ತಿದ್ದೇನೆ.ಜಿ. ಪರಮೇಶ್ವರ ಗೃಹಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.