ADVERTISEMENT

ತುಮಕೂರು | ನೀರಿನ ಟ್ಯಾಂಕ್ ಬಿರುಕು: ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 14:24 IST
Last Updated 21 ನವೆಂಬರ್ 2023, 14:24 IST
ನೀರಿನ ಟ್ಯಾಂಕ್ (ಸಂಗ್ರಹ ಚಿತ್ರ)
ನೀರಿನ ಟ್ಯಾಂಕ್ (ಸಂಗ್ರಹ ಚಿತ್ರ)   

ತುಮಕೂರು: ನೀರಿನ ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡದ ಮಾರಾಟಗಾರರಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ನೀರಿನ ಟ್ಯಾಂಕ್ ಖರೀದಿಸಿದ್ದ ಗ್ರಾಹಕರಿಗೆ ಟ್ಯಾಂಕ್ ಮೊತ್ತ ₹10,500, ಪರಿಹಾರವಾಗಿ ₹3 ಸಾವಿರ, ಕೋರ್ಟ್ ವೆಚ್ಚವಾಗಿ ₹5 ಸಾವಿರ ಸೇರಿ ಒಟ್ಟು ₹18,500 ನೀಡುವಂತೆ ಟ್ಯಾಂಕ್ ಮಾರಾಟ ಮಾಡಿದ್ದ ಅಂಗಡಿ ಮಾಲೀಕರಿಗೆ ಆದೇಶಿಸಲಾಗಿದೆ.

ನಗರದ ಅಂತರಸನಹಳ್ಳಿಯ ಪಿ.ರಾಜಣ್ಣ ಅವರು ಜೆ.ಸಿ.ರಸ್ತೆಯಲ್ಲಿರುವ ಚಂದ್ರದರ ಹಾರ್ಡ್ ವೇರ್‌ನಲ್ಲಿ 2021 ಏಪ್ರಿಲ್ 22ರಂದು ₹10,500 ಪಾವತಿಸಿ ನೀರಿನ ಸಿಂಟೆಕ್ಸ್ ಟ್ಯಾಂಕ್ ಖರೀದಿಸಿದ್ದರು. ಇದಕ್ಕೆ ಹತ್ತು ವರ್ಷಗಳ ವಾರಂಟಿ ನೀಡಲಾಗಿತ್ತು. ಬಳಕೆ ಆರಂಭಿಸಿದ ಒಂದು ವರ್ಷದಲ್ಲೇ ಟ್ಯಾಂಕ್‌ನಲ್ಲಿ ಬಿರುಕು ಬಿಟ್ಟು ನೀರು ಸೋರಲು ಆರಂಭಿಸಿತ್ತು. ಈ ವಿಷಯವನ್ನು ಅಂಗಡಿಯವರ ಗಮನಕ್ಕೆ ತಂದಿದ್ದರು. ನೀರು ಸೋರುವುದನ್ನು ತಡೆಗಟ್ಟಲು ಟೇಪ್ ಕೊಡುತ್ತೇವೆ. ಅದನ್ನು ಅಂಟಿಸುವಂತೆ ತಿಳಿಸಿದ್ದರು. ಅದರಂತೆ ಟೇಪ್ ಅಂಟಿಸಿದರೂ ನೀರು ಸೋರಿಕೆ ನಿಂತಿರಲಿಲ್ಲ.

ADVERTISEMENT

ಟ್ಯಾಂಕ್ ಬದಲಿಸಿಕೊಡಬೇಕು. ಇಲ್ಲವೆ ಹಣ ವಾಪಸ್ ನೀಡಬೇಕು ಎಂದು ಅಂಗಡಿ ಮಾಲೀಕರಿಗೆ ಸಾಕಷ್ಟು ಬಾರಿ ರಾಜಣ್ಣ ಮನವಿ ಮಾಡಿದ್ದರು. ಆರಂಭದಲ್ಲಿ ಸ್ಪಂದಿಸಿದ ಅಂಗಡಿ ಮಾಲೀಕರು ನಂತರ ಸರಿಯಾಗಿ ಸ್ಪಂದಿಸಲಿಲ್ಲ. ಕೊನೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅವರು ದೂರು ಸಲ್ಲಿಸಿದರು.

ದೂರು ಪರಿಗಣಿಸಿದ ಆಯೋಗವು ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತ್ತು. ಅಂಗಡಿ ಮಾಲೀಕರು ಮೊದಲ ಬಾರಿ ವಿಚಾರಣೆಗೆ ಹಾಜರಾದರೂ ನಂತರ ವಿಚಾರಣೆಗೆ ಹಾಜರಾಗಿ ತಮ್ಮ ವಾದ ಮಂಡಿಸಲಿಲ್ಲ. ಸಾಕಷ್ಟು ಬಾರಿ ನೋಟಿಸ್ ಜಾರಿ ಮಾಡಿದರೂ ವಿಚಾರಣೆಗೆ ಬರಲಿಲ್ಲ. ಕೊನೆಗೆ ವಿಚಾರಣೆ ನಡೆಸಿದ ಆಯೋಗ ಪರಿಹಾರ ನೀಡುವಂತೆ ಆದೇಶಿಸಿದೆ. ಆದೇಶ ನೀಡಿದ 45 ದಿನಗಳ ಒಳಗೆ ಪರಿಹಾರ ನೀಡಬೇಕು. ಇಲ್ಲವಾದರೆ ಆದೇಶ ಪಾಲನೆ ಆಗುವವರೆಗೂ ಪ್ರತಿ ದಿನವೂ ₹100 ದಂಡ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯರಾದ ಎನ್.ಕುಮಾರ, ನಿವೇದಿತಾ ರವೀಶ್ ನೇತೃತ್ವದ ಪೀಠ ಈ ಆದೇಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.