ADVERTISEMENT

‘2023ಕ್ಕೂ ಜಿಲ್ಲೆಯಲ್ಲೇ ಇರುತ್ತೇನೆ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:09 IST
Last Updated 5 ಡಿಸೆಂಬರ್ 2021, 5:09 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ತುಮಕೂರು: ‘ಈ ಚುನಾವಣೆಯಷ್ಟೇ ಅಲ್ಲ. ಮುಂದಿನ 2,023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಇರುತ್ತೇನೆ. ಎಲ್ಲಿಗೂ ಎದುರಿಕೊಂಡು ಹೋಗಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದರು.

ಮುಂದಿನ ವಿಧಾನಸಭೆಯಷ್ಟೇ ಅಲ್ಲ, 2,024ರ ಲೋಕಸಭೆ ಚುನಾವಣೆಯಲ್ಲೂ ಜಿಲ್ಲೆಗೆ ಬರುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಬೇಡವೆ? ಎಂಬುದನ್ನು ಜಿಲ್ಲೆಯ ಜನರು ನಿರ್ಧಾರ ಮಾಡುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ನಾನು ನಿಲ್ಲುವುದಾಗಿ ಹೇಳಿರಲಿಲ್ಲ. ನನ್ನ ನಾಲಿಗೆಯಿಂದ ಸೀಟು ಕೇಳಿದ್ದೇನೆ ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲಿ. ಅವರಾಗಿಯೇ ಒತ್ತಾಯ ಮಾಡಿದ್ದರಿಂದ ಸ್ಪರ್ಧಿಸಿದೆ. ಹೊಂದಾಣಿಕೆ ಮಾಡಿಕೊಂಡ ಸಮಯದಲ್ಲಿ ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ನಿಲ್ಲಬೇಕಾಯಿತು. ನಾನಾಗಿ ಬಂದಿದ್ದಲ್ಲ. ಇನ್ನೊಬ್ಬರ ಅವಕಾಶವನ್ನೂ ಕಿತ್ತುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ನನ್ನ ವಿರುದ್ಧ ಪ್ರಚಾರ ಮಾಡಿದರು. ಅನಾರೋಗ್ಯದ ನಡುವೆ ಬಂದು ಪ್ರಚಾರ ಮಾಡಿ ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದಕ್ಕೆ ಅವರು ನನ್ನನ್ನು ಸೋಲಿಸಿದರು. ಅವರಿಗೆ ನಾನು ಏನು ಅನ್ಯಾಯ, ಮೋಸ ಮಾಡಿದ್ದೆ. ಅವರೇ ಎಲ್ಲವನ್ನೂ ಹೇಳಲಿ. ನನ್ನನ್ನು ಸೋಲಿಸಿ ಮಾನ ತೆಗೆದರು. ಅವಮಾನ ಮಾಡಿದರು. ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ನನಗೆ ಅಗೋಚರ ಶಕ್ತಿ ಇದೆ. ನನ್ನನ್ನು ನೀವೇನು ಮಾಡಲಾಗುತ್ತದೆ’ ಎಂದು ಕಿಡಿಕಾರಿದರು.

‘ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ. ಆರ್.ಅನಿಲ್ ಕುಮಾರ್ ನಿಲ್ಲಿಸುವ ಮುಂಚೆ ಎಲ್ಲಾ ಮುಖಂಡರೊಂದಿಗೂ ಚರ್ಚಿಸಿ ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಜೆಡಿಎಸ್ ಯಾವ ಟೀಂ ಎನ್ನುವುದು ಫಲಿತಾಂಶ ಬಂದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಅಭ್ಯರ್ಥಿ ಗೆಲ್ಲಿಸುವ ಮೂಲಕ ಜೆಡಿಎಸ್ ಮತ್ತಷ್ಟು ಭದ್ರಪಡಿಸುತ್ತೇನೆ. ನಾನು ಎಲ್ಲಿಯೂ ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ, ನೋಡೋಣ ಏನಾಗುತ್ತದೆ’ ಎಂದು ವಿರೋಧಿಗಳಿಗೆ ಸವಾಲು
ಹಾಕಿದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪರವಾದ ಅಲೆ ಇದ್ದು, ಸ್ಪರ್ಧಿಸಿರುವ ಎಲ್ಲೆಡೆ ಗೆಲುವು ಸಾಧಿಸಲಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೇನೆ. ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮುಖಂಡರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಜಿಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಶಾಸಕ ಡಿ.ಸಿ.ಗೌರಿಶಂಕರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಯ್ಯ, ಮುಖಂಡರಾದ ಸಿರಾಕ್ ರವೀಶ್, ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಪಾಲನೇತ್ರಯ್ಯ, ಹೆಗ್ಗೆರೆ ಆಜಂ, ರೆಹಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.