ADVERTISEMENT

ಜ್ಞಾನದ ಬುತ್ತಿ ಉಣಬಡಿಸುವ ಶಿಕ್ಷಕ

ಎಸ್‌ಎಸ್‌ಐಟಿ ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:51 IST
Last Updated 4 ನವೆಂಬರ್ 2019, 14:51 IST
ಪ್ರೊ.ಲಕ್ಷೀತಾತಾಚಾರ್ ಅವರನ್ನು ವಿಚಾರ ಸಂಕಿರಣದಲ್ಲಿ ಸನ್ಮಾನಿಸಲಾಯಿತು
ಪ್ರೊ.ಲಕ್ಷೀತಾತಾಚಾರ್ ಅವರನ್ನು ವಿಚಾರ ಸಂಕಿರಣದಲ್ಲಿ ಸನ್ಮಾನಿಸಲಾಯಿತು   

ತುಮಕೂರು: ಶಿಕ್ಷಕರು ಮನಸ್ಸಿನಲ್ಲಿ ಜ್ಞಾನವನ್ನು ಶುದ್ಧವಾಗಿಸಿಕೊಂಡರೆ, ಉತ್ತಮ ಪ್ರೇರಕ ಶಕ್ತಿ ಆಗುತ್ತಾರೆ ಎಂದು ಮೇಲುಕೋಟೆ ರಾಮಾನುಜ ವಿದ್ಯಾಲಯ ಪರಿಷತ್ತಿನ ಮುಖ್ಯಸ್ಥ ಪ್ರೊ.ಲಕ್ಷೀತಾತಾಚಾರ್ ನುಡಿದರು.

ಎಸ್‌ಎಸ್‌ಐಟಿ ಕಾಲೇಜಿನಲ್ಲಿ ‘ಆಂತರಿಕ ಗುಣಮಟ್ಟದ ಭರವಸೆ ಕೋಶ’ದಿಂದ ನಡೆದ ವಿಚಾರ ಸಂಕಿರಣದಲ್ಲಿ, ‘ಮಾನವ ವ್ಯವಸ್ಥೆ, ಕಂಪ್ಯೂಟರ್ ವ್ಯವಸ್ಥೆ ಮತ್ತು ಬಳಕೆದಾರರ ಜವಾಬ್ದಾರಿ’ ಕುರಿತು ಮಾತನಾಡಿದರು.

ವಿವಿಧ ವಿಷಯಗಳ ಜ್ಞಾನವನ್ನು ಹೊಂದಿದ ಶಿಕ್ಷಕ ವಿದ್ಯಾರ್ಥಿಗಳಿಗೆ ಜ್ಞಾನದ ಬುತ್ತಿ ಉಣಬಡಿಸಬಲ್ಲ. ಕಲಿಯುವ ಸಮಯದಲ್ಲಿ ಹಲವು ಸಮಸ್ಯೆ-ಅವಮಾನಗಳು ಬಂದರೂ ನಮ್ಮ ಗುರಿಯತ್ತ ನಾವು ಮುನ್ನುಗ್ಗಿ ಸಫಲರಾಗಬೇಕು. ಆಗ ಅವಮಾನಿಸಿದವರು ನಮ್ಮನ್ನು ಪ್ರಶಂಸಿಸುವರು ಎಂದು ಹೇಳಿದರು.

ADVERTISEMENT

ಭಾರತದಲ್ಲಿ ತಾಂತ್ರಿಕ, ಸಂಸ್ಕೃತ ಮತ್ತು ಆಯುರ್ವೇದದ ಜ್ಞಾನವು ಅತ್ಯುತ್ತಮವಾಗಿದೆ. ಈ ಮೂರನ್ನು ಅರಿತವರು ಕೂಡ ಅಪ್ರತಿಮರಾಗುತ್ತಾರೆ. ನಿರಂತರವಾದ ಗಟ್ಟಿತನದಿಂದ ಸಂಶೋಧನೆ ಮಾಡುವ ಅವಶ್ಯಕತೆ ಇದೆ ಎಂದರು.

ನಮ್ಮ ದೇಶದಲ್ಲಿ ಆಯುರ್ವೇದದ ಅಧ್ಯಯನ ಮತ್ತು ಬಳಕೆ ಮಹತ್ವವಾಗಿದೆ‌. ಆದರೆ ಪ್ರಸ್ತುತ ನಾವು ಪಾಶ್ಚಿಮಾತ್ಯ ಚಿಕಿತ್ಸೆಗಳಿಗೆ ಮಾರು ಹೋಗಿದ್ದೇವೆ. ಇದು ನಮ್ಮ ಜ್ಞಾನದ ಉತ್ತೇಜನಗಳನ್ನು ಕುಂಠಿತಗೊಳಿಸುತ್ತದೆ. ನಾವು ಧರ್ಮವೆಂದರೆ ಜಾತಿ, ತಾರತಮ್ಯ ಎಂದು ತಿಳಿದಿದ್ದೇವೆ. ಆದರೆ ಧರ್ಮವೆಂದರೆ ನಾವು ಮಾಡುವ ಕಾರ್ಯ ಮತ್ತು ದೇವರು ಮಾಡುವ ವ್ಯವಸ್ಥಿತ ಕಾರ್ಯ ಎಂದು ಪ್ರತಿಪಾದಿಸಿದರು.

‘ಶಿಕ್ಷಣ ಉಪಕ್ರಮಗಳನ್ನು ಕಲಿಸುವ ಗುಣಮಟ್ಟದ ಭರವಸೆ’ ವಿಷಯದ ಕುರಿತು ಮಾತನಾಡಿ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಎಸ್.ರವಿಪ್ರಕಾಶ್, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಲವಲವಿಕೆಯಿಂದ ಇರಬೇಕು. ಅವರ ಮನಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು, ವಿದ್ಯಾರ್ಥಿಗಳು ಕೇಳುವ ಸಮಸ್ಯೆ ಮತ್ತು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಬೇಕು ಎಂದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಎಂ ಸಿದ್ದಪ್ಪ, ಆರ್.ಪ್ರಕಾಶ್, ಪ್ರಾಧ್ಯಾಪಕರು ಹಾಗೂ ಎಂ.ಟೆಕ್ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.