ADVERTISEMENT

‘ಜಿ.ಪಂ ಅಧ್ಯಕ್ಷ ಸ್ಥಾನ; ಯಾದವರಿಗೆ ನೀಡಿ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 11:29 IST
Last Updated 9 ಮಾರ್ಚ್ 2020, 11:29 IST

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಗುಬ್ಬಿ ತಾಲ್ಲೂಕು ಅಳಿಲುಘಟ್ಟ ಜಿ.ಪಂ ಕ್ಷೇತ್ರದ ಬಿಜೆಪಿ ಸದಸ್ಯೆ ಯಶೋದ ಶಿವಣ್ಣ ಅವರಿಗೆ ನೀಡಬೇಕು ಎಂದು ಕರ್ನಾಟಕ ಯಾದವ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂವರೆ ವರ್ಷ ಜೆಡಿಎಸ್‌ನ ಲತಾ ರವಿಕುಮಾರ್ ಹಾಗೂ ಉಳಿದ ಅವಧಿಗೆ ಯಶೋದ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಕುರಿತು ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ನಡುವೆ ಒಪ್ಪಂದ ಆಗಿತ್ತು’ ಎಂದರು.

ಜೆಡಿಎಸ್‌ನವರ ಅವಧಿ ಮುಗಿದು ಒಂದು ವರ್ಷ ಕಳೆದರೂ ಬಿಜೆಪಿ ಸದಸ್ಯೆಗೆ ಅಧಿಕಾರ ಬಿಟ್ಟುಕೊಡುತ್ತಿಲ್ಲ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರೇ ಮಾತುಕತೆಗೆ ಕರೆದರೂ ಬಿಜೆಪಿಯ ಬಿ.ಸುರೇಶ್ ಗೌಡ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಾಡುಗೊಲ್ಲ ಜನಾಂಗಕ್ಕೆ ದೊರೆಯಬೇಕಿದ್ದ ಅಧ್ಯಕ್ಷ ಸ್ಥಾನ ಕೈತಪ್ಪುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಮಯದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಗೊಲ್ಲ ಸಮುದಾಯ ಬಿಜೆಪಿ ಬೆಂಬಲಿಸಿದೆ. ಆದರೆ ಈಗ ನಿರ್ಲಕ್ಷಿತ ಸಮುದಾಯದ ಮಹಿಳೆಗೆ ಅಧಿಕಾರ ತಪ್ಪಿಸಲು ಮುಖಂಡರು ಯತ್ನಿಸುತ್ತಿರುವುದು ದುರದೃಷ್ಟಕರ. ಒಂದು ವೇಳೆ ಯಶೋದ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿದರೆ ಮುಂದಿನ ದಿನಗಳಲ್ಲಿ ಇಡೀ ಸಮುದಾಯ ಬಿಜೆಪಿ ವಿರುದ್ಧ ನಿಲ್ಲುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಮುಖಂಡರಾದ ದೇವರಪ್ಪ, ಮಹಾಲಿಂಗಯ್ಯ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.